ಬೆಂಗಳೂರು: ಇತ್ತೀಚೆಗಷ್ಟೇ ನೆಲಮಂಗಲದಲ್ಲಿ ಎಸಿಬಿ ದಾಳಿಗೊಳಗಾಗಿದ್ದದ್ದರಿಂದ ತೀವ್ರ ನೊಂದಿದ್ದ ಕೆಎಎಸ್ ಅಧಿಕಾರಿ ಎಲ್.ಸಿ. ನಾಗರಾಜು ಅವರ ಪತ್ನಿ ನಾಗರತ್ನ ಇಂದು ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.
ಎಸಿಬಿ ದಾಳಿಯಿಂದಾಗಿ ತೀವ್ರ ನೊಂದಿದ್ದ ನಾಗರತ್ನ, ಇದರ ಹಿಂದೆ ಷಡ್ಯಂತರ ಇದೆ ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ ಆಕ್ರೋಶ ಹೊರಹಾಕಿದ್ದರು.
ಇತ್ತೀಚೆಗೆ ನಾಗರತ್ನ ಅವರಿಗೆ ಹೃದಯಾಘಾತವಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು.
ಇಂದು ಮುಂಜಾನೆ 3.30ರಲ್ಲಿ ತೀವ್ರ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.
ಇತ್ತೀಚೆಗೆ ನೆಲಮಂಗಲದಲ್ಲಿ ನಾಗರಾಜು ಮನೆ ಮತ್ತು ಸಂಬಂಧಿಕರ ಮನೆ ಮೇಲೆ ಎಸಿಬಿ ದಾಳಿ ನಡೆದಿತ್ತು.
ಈ ವೇಳೆ ಅಪಾರ ಪ್ರಮಾಣದ ನಗದು, ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ಕುರಿತು ಮಾತನಾಡಿದ್ದ ನಾಗರಾಜು, ಇದೆಲ್ಲವೂ ವೈಟ್ ಮನಿ. ಪತ್ನಿಗೆ ಸಂಬಂಧಿಸಿದ ಆಸ್ತಿಯನ್ನು 2.4 ಕೋಟಿಗೆ ಮಾರಾಟ ಮಾಡಿದ್ದೆ.
ಅದರ ಹಣ ಮನೆಯಲ್ಲಿತ್ತು. ನಾನು ಪ್ರಾಮಾಣಿಕವಾಗಿದ್ದೇನೆ. ಬೇಕಂತಲೇ ನನ್ನನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಇದು 3ನೇ ಬಾರಿಯ ದಾಳಿ ಎಂದಿದ್ದರು.