ಬೆಂಗಳೂರು : ಸಚಿವ ಉಮೇಶ್ ಕತ್ತಿ ಅವರು ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾದರು. ರಾತ್ರಿ ಅವರನ್ನು ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಹೃದಯಾಘಾತ ಆಗಿತ್ತು.
ಎಂ.ಎಸ್.ರಾಮಯ್ಯ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಅವರು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು, ಅರಣ್ಯ ಇಲಾಖೆ ಹಾಗೂ ವಿಜಯಪುರ ಉಸ್ತುವಾರಿ ಸಚಿವರಾಗಿ ಉಮೇಶ್ ಕತ್ತಿ ಹೊಣೆ ನಿರ್ವಹಿಸುತ್ತಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಒಲವು ಹೊಂದಿದ್ದರು ಉಮೇಶ್ ಕತ್ತಿ. ಅವರು ಹುಕ್ಕೇರಿ ಶಾಸಕರಾಗಿದ್ದರು. ತೀವ್ರ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿಯನ್ನು ಪ್ರತಿನಿಧಿಸುತ್ತಿದ್ದ ಅವರು, ಒಟ್ಟು ಎಂಟು ಬಾರಿ ಶಾಸಕರಾಗಿ ಗೆದ್ದು ಬಂದಿದ್ದರು. ನಾಲ್ಕು ಬಾರಿ ಸಚಿವರಾಗಿದ್ದರು.
ಆಂಧ್ರಪ್ರದೇಶ, ತೆಲಂಗಾಣದಂತೆ ಕರ್ನಾಟಕದಲ್ಲೂಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂದು ಉಮೇಶ್ ಕತ್ತಿ ದನಿ ಎತ್ತಿದ್ದರು. ಜತೆಗೆ, ಅಖಂಡ ರಾಜ್ಯದ ಸಿಎಂ ಆಗುವ ಆಕಾಂಕ್ಷೆಯನ್ನೂ ಬಹಿರಂಗವಾಗಿ ವ್ಯಕ್ತಪಡಿಸಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹೋದ್ಯೋಗಿಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
‘ಅರಣ್ಯ ಸಚಿವ, ನನ್ನ ಆಪ್ತ ಸಹೋದ್ಯೋಗಿ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ.
ಅವರ ನಿಧನದಿಂದ ರಾಜ್ಯ ಓರ್ವ ನುರಿತ ಮುತ್ಸದ್ಧಿ,ಕ್ರಿಯಾಶೀಲ ಮುಖಂಡ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಟ್ವೀಟಿಸಿದ್ದಾರೆ.
ಆಸ್ಪತ್ರೆಯ ಸಮೀಪ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ‘ಆಸ್ಪತ್ರೆಗೆ ಬರುವುದಕ್ಕೆ ಮುನ್ನವೇ ಪಲ್ಸ್ ನಿಂತಿತ್ತು. ಶೌಚಾಲಯಕ್ಕೆ ತೆರಳಿದ್ದ ಅವರಿಗೆ ಹೃದಯಾಘಾತ ಆಗಿದೆ. ಅವರನ್ನು ಉಳಿಸಲು ಸುಮಾರು ಅರ್ಧ ತಾಸು ವೈದ್ಯರು ಪ್ರಯತ್ನ ಮಾಡಿದ್ದಾರೆ. ಈ ಹಿಂದೆ ಎರಡು ಬಾರಿ ಅವರಿಗೆ ಹೃದಯಾಘಾತ ಆಗಿತ್ತು ಎಂದು ಮಾಹಿತಿ ನೀಡಿದ್ದಾರೆ.