ಮಂಗಳೂರು/ಚಿಕ್ಕಮಗಳೂರು : ಆರು ಜನ ನಕ್ಸಲರ ಶರಣಾಗತಿಯೊಂದಿಗೆ ಕರ್ನಾಟಕ ರಾಜ್ಯ ನಕ್ಸಲ್ ಮುಕ್ತ ರಾಜ್ಯ ಎಂದು ಸರ್ಕಾರ ಹೇಳುತ್ತಿದ್ದರೂ, ಆ ಒಬ್ಬ ಕುಖ್ಯಾತ ನಕ್ಸಲ್ ಇನ್ನೂ ಶರಣಾಗತಿಯಾಗದೇ ತಲೆಮರೆಸಿಕೊಂಡಿದ್ದಾನೆ.
ರಾಜ್ಯದಲ್ಲಿ ಕೆಲ ತಿಂಗಳ ಹಿಂದೆ ಕಾಣಿಸಿಕೊಂಡಿದ್ದ ಎಂಟು ನಕ್ಸಲರ ಪೈಕಿ ವಿಕ್ರಮ್ ಗೌಡ ಎನ್ ಕೌಂಟರ್ ಆಗಿದ್ದರೆ, ಆರು ಮಂದಿ ಬುಧವಾರ ಶರಣಾಗತರಾಗಿದ್ದಾರೆ. ಆದರೆ ಓರ್ವ ನಕ್ಸಲ್ ರವಿಂದ್ರ ಮಾತ್ರ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾನೆ.
ಹೇಗಾದರೂ ಮಾಡಿ ಆತನನ್ನೂ ಶರಣಾಗತಿ ಮಾಡಿಸಲು ನಕ್ಸಲ್ ಶರಣಾಗತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ಪ್ರಯತ್ನಪಟ್ಟಿದ್ದರು. ಆದರೆ ಅದು ಸಾಧ್ಯವಾಗಿಲ್ಲ.
ಜಾತ್ರೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದ ರವೀಂದ್ರ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಕೊಟೆ ಹೊಂಡದ ಮರಾಠ ಕಾಲೋನಿ ನಿವಾಸಿಯಾಗಿರುವ ರವೀಂದ್ರ ನಾಯ್ಕ ಪೊಲೀಸರಿಗೆ ಬೇಕಾಗಿರುವ ಕೊನೆಯ ನಕ್ಸಲ್ ಮುಖಂಡನಾಗಿದ್ದಾನೆ. ಈತ 2007ರಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ನಡೆದ ಎಳ್ಳು ಅಮಾವಾಸ್ಯೆ ಜಾತ್ರೆಯಲ್ಲಿ, ಅಂದು ನಕ್ಸಲ್ ಸಂಘಟನೆಯಲ್ಲಿ ಸಕ್ರೀಯಳಾಗಿದ್ದ ಶ್ರೀಮತಿಯೊಂದಿಗೆ ಕಾಣಿಸಿಕೊಂಡಿದ್ದೇ ಕೊನೆ. ನಂತರ ಆತ ಬಹಿರಂಗವಾಗಿ ಕಾಣಿಸಿಕೊಳ್ಳಲೇ ಇಲ್ಲ.
ಇದನ್ನೂ ಓದಿ: ನಕ್ಸಲರ ಶರಣಾಗತಿ ಬೆನ್ನಲ್ಲೇ ಮುಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳು ಕೊನೆಗೂ ಪತ್ತೆ !
ನಕ್ಸಲ್ ಸಂಘಟನೆ ತೊರೆದ ಶ್ರೀಮತಿ
ರವೀಂದ್ರ ನಾಯಕ ಅವರ ಶ್ರೀಮತಿ ನಕ್ಸಲ್ ಸಂಘಟನೆ ತೊರೆದು ಜಿಲ್ಲಾಡಳಿತದೆದುರು ಶರಣಾದರೂ ರವೀಂದ್ರ ನಾಯ್ಕ ಮಾತ್ರ ಚಳುವಳಿಯಲ್ಲೇ ಸಕ್ರೀಯನಾಗಿದ್ದ. ಆತನ ವಿರುದ್ದ ಶೃಂಗೇರಿ ಪೊಲೀಸ್ ಠಾಣೆಯಲ್ಲೇ ಸುಮಾರು 15 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಚಿಕ್ಕಮಗಳೂರಿನ ಬೇರೆ ಬೇರೆ ಠಾಣೆಗಳು, ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು ಸುಮಾರು 38 ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಹೊರ ರಾಜ್ಯಗಳಲ್ಲೂ ಪ್ರಕರಣಗಳಿವೆ ಎನ್ನಲಾಗಿದೆ.
ಶರಣಾಗತಿಗೆ ಒಪ್ಪುತ್ತಿಲ್ಲ ರವೀಂದ್ರ
ಕಳೆದ 18 ವರ್ಷಗಳ ಹಿಂದೆ ನಕ್ಸಲ್ ಸಂಘಟನೆ ಸೇರಿಕೊಂಡಿದ್ದ ರವೀಂದ್ರ ನಾಯ್ಕ ಈಗ ಶರಣಾಗತಿ ಹೊಂದಿರುವ ಆರು ಜನರಿಗಿಂತಲೂ ಕಿರಿಯ ಎನ್ನಲಾಗುತ್ತಿದೆ. ಇನ್ನೂ ಹೋರಾಟದ ಕಿಚ್ಚಿರುವುದರಿಂದ ಆತ ಶರಣಾಗತಿಗೆ ಒಪ್ಪುತ್ತಿಲ್ಲ ಎಂದೂ ನಿನ್ನೆ ಪ್ರವಾಸಿಮಂದಿರದ ಬಳಿ ನಕ್ಸಲ್ ಸಹಾನುಭೂತಿ ಹೊಂದಿದ ಕೆಲವರು ಈ ಕುರಿತು ಮಾತನಾಡಿಕೊಂಡಿದ್ದಾರೆ.
ಸ್ಪಷ್ಟನೆ ಕೊಟ್ಟ ಗೃಹ ಸಚಿವರು
ಈ ಬಗ್ಗೆ ಸ್ಪಷ್ಟನೆ ಕೊಟ್ಟ ಗೃಹ ಸಚಿವ ಡಾ.ಜಿ. ಪರಮೇಶ್ವರ್, “ನಕ್ಸಲ್ ಚಟುವಟಿಕೆ ಬಗ್ಗೆ ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಶರಣಾಗತರಾಗಿರುವ ಆರು ಜನರೇ ಕೊನೆ ಎಂಬುದಾಗಿದೆ. ನಕ್ಸಲ್ ರವೀಂದ್ರನನ್ನು ಶರಣಾಗತರಾಗಿರುವ ಗುಂಪಿನವರು ಹೊರ ಹಾಕಿದ್ದರು ಎನ್ನುವ ಮಾಹಿತಿ ಇದೆ. ಯಾವ ಕಾರಣಕ್ಕೆ ಹೊರಹಾಕಿದ್ದರು ಎಂಬುದು ಗೊತ್ತಿಲ್ಲ, ತನಿಖೆ ನಡೆದಿದೆ. ನಕ್ಸಲರ ಶಸ್ತ್ರಾಸ್ತ್ರಗಳಿಗೆ ಸಂಬಂಧಪಟ್ಟಂತೆ ಪೊಲೀಸರು ಅಗತ್ಯಕ್ರಮ ಕೈಗೊಳ್ಳಲಿದ್ದಾರೆ” ಎಂದು ಹೇಳಿದ್ದಾರೆ.
ನಕ್ಸಲ್ ಮುಕ್ತ ರಾಜ್ಯ ಎನ್ನುವ ಅಧಿಕೃತ ಘೋಷಣೆ ಹೊರಬೀಳಲು ಅಡ್ಡಿಯಾಗಿರುವ ಕೊನೆಯ ಹೆಸರು ಈಗ ರವೀಂದ್ರ ನಾಯ್ಕನದ್ದಾಗಿದೆ. ಆದರೆ ಈತ ಮಾತ್ರ ನಾಪತ್ತೆಯಾಗಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದೆ.