ಮಂಗಳೂರು: ಕರ್ನಾಟಕದಲ್ಲಿರುವ ಸರಕಾರ ನಿರ್ಜೀವ ಸರಕಾರ. ಕೊರೊನಾ ಮೂರನೇ ಅಲೆಗೆ ಕಾಲಿಟ್ಟರೂ 1 ಮತ್ತು 2 ಅಲೆಯಲ್ಲಿ ನಾವು ಏನು ಸುಧಾರಿಸಿಲ್ಲ. ಬಹಳ ವೈದ್ಯಕೀಯ ಸೌಲಭ್ಯವುಳ್ಳ ದ.ಕ ಜಿಲ್ಲೆಯಲ್ಲೇ ಹೆಚ್ಚು ಕೊರೊನಾ ಉಲ್ಬಣಗೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಟೀಕಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸರಿಯಾಗಿ ಲಸಿಕೆ ಕೂಡ ವಿತರಣೆ ಆಗುತ್ತಿಲ್ಲ. ಬಿಎಸ್ವೈ ಸರಕಾರ ಬಂದು ಎರಡು ವರ್ಷ ಆಯಿತು. ಮುಖ್ಯಮಂತ್ರಿ ಬದಲಾವಣೆ ಆಯಿತೇ ವಿನಃ ಆಡಳಿತ ಯಂತ್ರದಲ್ಲಿ ಮಾತ್ರ ಏನು ಬದಲಾವಣೆ ಆಗಿಲ್ಲ. ಶಿಸ್ತಿನ ಪಕ್ಷದ ಅಶಿಸ್ತು ಇಂದು ಜಗಜಾಹೀರಾಗಿದೆ. ಸರಕಾರ ಮಾತ್ರ ಸಂಪುಟ ವಿಸ್ತರಣೆ, ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಲಾಬಿ ನಡೆಸಬಹುದಾಗಿದೆ. ನೂತನ ಮುಖ್ಯಮಂತ್ರಿಗಳು ಕಾಟಚಾರಕ್ಕೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಬಸವರಾಜ್ ಬೊಮ್ಮಾಯಿ ಅವರು ಯಡಿಯೂರಪ್ಪ ನವರ ತರ ಸಂಪುಟವಿಲ್ಲದೆ ಅರೆಹುಚ್ಚರಂತೆ ತಿರುಗಾಡುವ ಪರಿಸ್ಥಿತಿ ಅವರಿಗೆ ಬರುವುದು ಬೇಡ ಎಂದು ವಿಧಾನ ಪರಿಷತ್ತು ಶಾಸಕ ಹರೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು