ಬೆಳಗಾವಿ : ಇಂದು ಸಂಜೆಯೊಳಗೆ ಹೈಕಮಾಂಡ್ ನಿಂದ ಸಂದೇಶ ಬರಬಹುದು, ಸಂದೇಶ ಬಂದ ಕೂಡಲೇ ನಿಮಗೂ ತಿಳಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹೆಚ್ಚು ಹಾನಿಯಾಗಿದೆ, ಎಲ್ಲೆಲ್ಲಿ ಏನೇನು ಆಗಿದೆ, ಆಸ್ತಿಪಾಸ್ತಿ, ಜನರಿಗೆ ಆಗಿರುವ ಸಂಕಷ್ಟ, ನಷ್ಟ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದೇನೆ, ನನ್ನ ಜೊತೆ ಸಂಪುಟ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು ಇದ್ದಾರೆ ಎಂದು ಹೇಳಿದರು.
ಹೈಕಮಾಂಡ್ ನಿಂದ ಸಂದೇಶ ಬಂದ ಮೇಲೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು, ಎರಡು ವರ್ಷಗಳ ಆಡಳಿತ ತೃಪ್ತಿ ನೀಡಿದೆಯೇ ಎಂದು ಸುದ್ದಿಗಾರರು ಕೇಳಿದಾಗ ಜನರಿಗೆ ನನ್ನ ಆಡಳಿತ ತೃಪ್ತಿ ನೀಡಿದರೆ ಆಯಿತು ಎಂದು ಸಿಎಂ ಹೇಳಿದ್ದಾರೆ.
ದಲಿತ ನಾಯಕ ಸಿಎಂ ಆಗಲಿದ್ದಾರೆಯೇ ಎಂದು ಕೇಳಿದ್ದಕ್ಕೆ ಮುಂದಿನ ಸಿಎಂ ಯಾರಾಗಬೇಕೆಂದು ನಿರ್ಧಾರ ಮಾಡುವುದು ನಾನಲ್ಲ, ಹೈಕಮಾಂಡ್, ಸ್ವಾಮೀಜಿಗಳು ಕೂಡ ನನ್ನ ಪರ ಸಮಾವೇಶ ಮಾಡುವ ಅಗತ್ಯವಿಲ್ಲ ಎಂದರು. ಪ್ರಧಾನಿ ಮೋದಿ, ಅಮಿತ್ ಶಾ, ರಾಷ್ಟ್ರಾಧ್ಯಕ್ಷ ನಡ್ಡಾ ಅವರ ಮೇಲೆ ನನಗೆ ನಂಬಿಕೆಯಿದೆ ಎಂದರು.