ಉಡುಪಿ ಸುವರ್ಣ ತ್ರಿಭುಜ ಬೋಟ್ ದುರಂತದಲ್ಲಿ ನಾಪತ್ತೆಯಾದವರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಚೆಕ್ ವಿತರಿಸಿದ ಸಿಎಂ..!
ಬೆಂಗಳೂರು : ಉಡುಪಿ ಮಲ್ಪೆ ಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ “ಸುವರ್ಣ ತ್ರಿಭುಜ” ಬೋಟ್ ನಲ್ಲಿದ್ದ 7 ಜನ ಮೀನುಗಾರರ ಕುಟುಂಬಕ್ಕೆ ತಲಾ ರೂ. 10 ಲಕ್ಷದ ಪರಿಹಾರದ ಚೆಕ್ ಮಾನ್ಯ ಮುಖ್ಯಮಂತ್ರಿಯವರಾದ ಬಿ.ಎಸ್. ಯಡಿಯೂರಪ್ಪ ಅವರು ವಿತರಿಸಿದರು.
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆ – 2020 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಪರಿಹಾರ ಧನದ ಚೆಕ್ಕನ್ನು ವಿತರಣೆ ಮಾಡಿದರು.
ಕಳೆದ 2018ರ ಡಿಸೆಂಬರ್ ತಿಂಗಳಲ್ಲಿ ಉಡುಪಿಯ ಮಲ್ಪೆ ಬಂದರಿನಿಂದ ಮಾಲಕರ ಸಹಿತ ಏಳು ಜನ ಮೀನುಗಾರರಿದ್ದ “ಸುವರ್ಣ ತ್ರಿಭುಜ” ಬೋಟ್ ಮರಳಿ ವಾಪಸ್ ಬಾರದೆ ನಾಪತ್ತೆಯಾಗಿತ್ತು.
ಉನ್ನತಮಟ್ಟದಲ್ಲಿ ಪ್ರಯತ್ನಿಸಿ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲಾಗಿತ್ತು.
ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ ನಲ್ಲಿದ್ದ 7 ಜನ ಮೀನುಗಾರರ ಕುಟುಂಬ ಅವರನ್ನೇ ಅವಲಂಬಿಸಿರುವುದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದರು.
ಈ ಹಿನ್ನೆಲೆಯಲ್ಲಿ ಇವರ ಕುಟುಂಬಕ್ಕೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ತಲಾ ರೂ. 10 ಲಕ್ಷ ನೀಡುವಂತೆ ಶಾಸಕ ಕೆ. ರಘುಪತಿ ಭಟ್ ಅವರು ಮಾನ್ಯ ಮುಖ್ಯಮಂತ್ರಿಯವರನ್ನು ವಿನಂತಿಸಿರುವಂತೆ ಈ ಪರಿಹಾರದ ಮೊತ್ತವನ್ನು ಬಿಡುಗಡೆಗೊಳಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮತ್ಸ್ಯ ಸಂಪದ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿ ಮತ್ಸ್ಯಸಿರಿ, ಸಾಗರೋತ್ಪನ್ನ ಖಾದ್ಯಗಳ ಬಿಡುಗಡೆ ಮಾಡಿದರು.
ಮುಜರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಮೀನುಗಾರಿಕಾ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಕಂದಾಯ ಸಚಿವರಾದ ಆರ್. ಅಶೋಕ್, ಶಾಸಕ ಕುಮಾರ್ ಬಂಗಾರಪ್ಪ, ಮೀನುಗಾರಿಕಾ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ನಿರ್ದೇಶಕರಾದ ರಾಮಾಚಾರ್ಯ ಉಪಸ್ಥಿತರಿದ್ದರು.