ಶಿವಮೊಗ್ಗ : ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದ ನಳಿನ್ಕುಮಾರ್ ಕಟೀಲ್ ಅವರು ಇಂದು, ಶಿವಮೊಗ್ಗದಲ್ಲಿ ಕೊಲೆಯಾಗಿರುವ ಹರ್ಷ ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಸಚಿವರಾದ ಕೆ.ಎಸ್.ಈಶ್ವರಪ್ಪ, ರಾಜ್ಯ ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ರಾಜ್ಯ ಪ್ರಕೋಷ್ಠಗಳ ಸಂಚಾಲಕರಾದ ಭಾನುಪ್ರಕಾಶ್, ಶಾಸಕರಾದ ಯು. ರಾಜೇಶ್ ನಾಯ್ಕ್, ಜಿಲ್ಲಾಧ್ಯಕ್ಷರಾದ ಟಿ.ಡಿ.ಮೇಘರಾಜ್ ಜೊತೆಗೆ ಹತ್ಯೆಗೀಡಾದಂತ ಬಜರಂಗದಳದ ಕಾರ್ಯಕರ್ತ ಹರ್ಷ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ ಅವರು, ಹಿಂದೂ ಸಂಘಟನೆಯ ಹರ್ಷ ಕಗ್ಗೊಲೆ ಆಗುವ ಕಲ್ಪನೆ ನಮಗ್ಯಾರಿಗೂ ಇರಲಿಲ್ಲ.
ಕಗ್ಗೊಲೆ ಆದ ತಕ್ಷಣ ಕೊಲೆಗಡುಕ ಗೂಂಡಾಗಳನ್ನು ರಾಜ್ಯ ಸರ್ಕಾರ ಬಂಧಿಸಿದೆ. ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಇಲ್ಲಿಗೆ ಬಂದು ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಸಹಕಾರದ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಕೊಲೆಗಡುಕರು ಮತ್ತು ಘಟನೆಯ ಹಿಂದಿರುವ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರದಿಂದಲೂ ಪರಿಹಾರ ಕೊಡುವುದಾಗಿ ತಿಳಿಸಿದ್ದಾರೆ ಎಂದ ಅವರು, ಹರ್ಷ ಕುಟುಂಬಕ್ಕೆ ನೆರವಾದ ಹಿಂದೂ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ವಿಚಾರದಲ್ಲಿ ಆರೋಪ ಮಾಡಿದವರಿಗೆ ನಿಧಾನಕ್ಕೆ ಉತ್ತರ ಲಭಿಸಲಿದೆ. ಪಕ್ಷ ಮತ್ತು ಸರ್ಕಾರ ಕೈಗೊಳ್ಳುವ ಕ್ರಮ ನಿಧಾನವಾಗಿ ಗೊತ್ತಾಗಲಿದೆ ಎಂದು ಅವರು ಹೇಳಿದರು.