ಉಡುಪಿ: ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವೃಂದಾವನ ಸನ್ನಿಧಿಯಲ್ಲಿ ಶುಕ್ರವಾರ (ಜು.1) ಕರಾವಳಿ ಸಂತರ ಸಮಾಗಮ ವೈಭವದಿಂದ ನೆರವೇರಿತು.
ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ,
ಬೆಂಗಳೂರು ಆರ್ಯ ಈಡಿಗ ಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಉಡುಪಿ ಪಡುಕುತ್ಯಾರು ಆನೆಗುಂದಿ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ,
ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕರಿಂಜೆ ಕ್ಷೇತ್ರದ ಶ್ರೀ ಸತ್ಯನಾರಾಯಣ ಸ್ವಾಮೀಜಿ, ಶ್ರೀ ವೀರಾಂಜನೇಯ ಸ್ವಾಮೀಜಿ,
ಶ್ರೀ ಮುಕ್ತಾನಂದ ಸ್ವಾಮೀಜಿ, ಮಂಗಳೂರು ರಾಮಕೃಷ್ಣಾಶ್ರಮದ ಸ್ವಾಮಿ ರಘುರಾಮಾನಂದಜೀ, ಕಾರ್ಕಳ ನೀರೆ ಬೈಲೂರು ರಾಮಕೃಷ್ಣಾಶ್ರಮದ ಸ್ವಾಮಿ ಪ್ರಬೋದಾನಂದ ಜೀ ಉಪಸ್ಥಿತರಿದ್ದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿದ್ದರು.
ನೂರಾರು ವಿದ್ಯಾರ್ಥಿಗಳು ವಾದ್ಯಘೋಷ ಸಹಿತ ಪೂರ್ಣಕುಂಭದೊಂದಿಗೆ ಎಲ್ಲ ಸ್ವಾಮೀಜಿಗಳನ್ನೂ ಬರಮಾಡಿಕೊಂಡರು. ಎಲ್ಲರೂ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವೃಂದಾವನ ದರ್ಶನ ಮಾಡಿ ನಮಸ್ಕರಿಸಿದರು. ವಿದ್ಯಾಪೀಠದ ಆವರಣದಲ್ಲಿ ನಿರ್ಮಾಣವಾಗಲಿರುವ ನೂತನ ಶ್ರೀ ವಿಶ್ವೇಶತೀರ್ಥ ಗುರುಭವನಕ್ಕೆ ಶಿಲಾಪೂಜನ ನೆರವೇರಿಸಿದರು.