ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಚೇತನ ನಟ ಎಸ್.ಶಿವರಾಂ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಕಿರುತೆರೆ ಹಾಗೂ ಹಿರಿತೆರೆಯ ಹಲವಾರು ಚಿತ್ರ ಹಾಗೂ ಸೀರಿಯಲ್ಗಳಲ್ಲಿ ಅವರು ನಟಿಸಿದ್ದರು. ಇತ್ತೀಚೆಗೆ ಅವರಿಗೆ ಅಪಘಾತವಾಗಿ, ತಲೆಗೆ ಪೆಟ್ಟು ಬಿದ್ದಿತ್ತು.
ವಯಸ್ಸಾದ ಕಾರಣ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
‘ನಮ್ಮ ತಂದೆ ಶಿವರಾಮ್ರವರು ಇನ್ನು ನಮ್ಮ ಜತೆ ಇಲ್ಲ. ಶಿವರಾಮ್ರವರು ಭಗವಂತನ ಪಾದ ಸೇರಿದ್ದಾರೆ. ಆಸ್ಪತ್ರೆ ವತಿಯಿಂದ ಎಲ್ಲಾ ರೀತಿ ಚಿಕಿತ್ಸೆ ನೀಡಿದ್ದಾರೆ. ಆದರೆ ಶಿವರಾಮ್ರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಅವರ ಮಗ ಲಕ್ಷ್ಮೀಶ್ ಹೇಳಿದ್ದಾರೆ.
1938ರಲ್ಲಿ ಚೂಡಸಂದ್ರ ಹಳ್ಳಿಯಲ್ಲಿ ಜನಿಸಿದ್ದ ಎಸ್. ಶಿವರಾಂ, 6 ದಶಕಗಳ ಕಾಲ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಚಿತ್ರರಂಗದಲ್ಲಿ ಅವರು ಶಿವರಾಮಣ್ಣ ಎಂದೇ ಎಲ್ಲರಿಗೂ ಪರಿಚಿತರಾಗಿದ್ದರು.