ಬೆಂಗಳೂರು : ಚಂದನವನದ ಖ್ಯಾತ ಪೋಷಕ ನಟ ಮಲ್ಲ, ಯಜಮಾನ, ಸಾಂಗ್ಲಿಯಾನ ಖ್ಯಾತಿಯ ಲಕ್ಷ್ಮಣ್ ಅವರು ಹೃದಯಾಘಾತದಿಂದ ಸೋಮವಾರ ಬೆಂಗಳೂರಿನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರಿಗೆ 74 ವರ್ಷ ವಯಸ್ಸಾಗಿತ್ತು. ವಯೋಸಹಜ ಸಣ್ಣಪುಟ್ಟ ಅನಾರೋಗ್ಯಗಳಿಂದ ಬಳಲುತ್ತಿದ್ದ ಅವರಿಗೆ ನಿನ್ನೆ ಎದೆನೋವು ಕಾಣಿಸಿಕೊಂಡಿತ್ತು.
ಮಧ್ಯಾಹ್ನ 3.30ಕ್ಕೆ ನಾಗರಭಾವಿಯಲ್ಲಿರುವ ಜಿಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
ಇಸಿಜಿ ಮಾಡಿದ ನಂತರ ಏನೂ ಆಗಿಲ್ಲವೆಂದು ವೈದ್ಯರು ತಿಳಿಸಿದ ಬಳಿಕ ಮನೆಗೆ ಮರಳಿದ್ದರು. ಬಳಿಕ ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅಂತ, ಮಲ್ಲ, ಯಜಮಾನ, ಸೂರ್ಯವಂಶ, ಸಾಂಗ್ಲಿಯಾನ, ದಾದಾ, ಒಲವಿನ ಉಡುಗೊರೆ ಸೇರಿದಂತೆ 300 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಲಕ್ಷ್ಮಣ್ ಅವರು, ಹೆಚ್ಚಿನ ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದರು.
ಲಕ್ಷ್ಮಣ್ ಅವರು ಅಂಬರೀಷ್, ಶಂಕರನಾಗ್ ಮತ್ತು ವಿಷ್ಣುವರ್ಧನ್ ಅವರ ಜತೆಗೂ ಅಭಿನಯಿಸಿದ್ದರು.
ಬೆಂಗಳೂರಿನಲ್ಲಿ ಜನಿಸಿದ ಲಕ್ಷ್ಮಣ್ ಅವರ ತಂದೆ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು.
ರಂಗಭೂಮಿ ಮೂಲಕ ಸಿನಿಮಾ ರಂಗಕ್ಕೆ ಕಾಲಿರಿಸಿದ್ದ ಲಕ್ಷ್ಮಣ್, ‘ಉಷಾ ಸ್ವಯಂವರ’ ಎಂಬ ಸಿನಿಮಾ ಮೂಲಕ ನಾಯಕರಾಗಿಯೇ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದರು.
ಬಳಿಕ ಅವರು ಖಳನಾಯಕನಾಗಿ ಮಿಂಚಿದ್ದರು. ಅಂತ, ಸಾಂಗ್ಲಿಯಾನ ಸಿನಿಮಾಗಳು ಅವರ ಸಿನಿ ಬದುಕಿಗೆ ಹೊಸ ತಿರುವು ತಂದುಕೊಟ್ಟಿದ್ದವು.