ಕನ್ನಡಿಕಟ್ಟೆ ಗಣೇಶ ಶೆಟ್ಟಿ ಅವರಿಗೆ ಕದ್ರಿ ವಿಷ್ಣು ಪ್ರಶಸ್ತಿ
ಮಂಗಳೂರು: ಶ್ರೀ ಕಟೀಲು ಮೇಳದ ಪ್ರಧಾನ ವೇಷಧಾರಿ ,ಅರ್ಥಧಾರಿ ಶ್ರೀ ಗಣೇಶ ಶೆಟ್ಟಿ ಕನ್ನಡಿಕಟ್ಟೆ ಅವರಿಗೆ ಕದ್ರಿ ಯಕ್ಷ ಬಳಗವು 2020 ಸಾಲಿನ ಕದ್ರಿ ವಿಷ್ಣು ಪ್ರಶಸ್ತಿ ಯನ್ನು ನೀಡಿ ಗೌರವಿಸಲಿದೆ ಎಂದು ಯಕ್ಚ ಬಳಗ ಕದ್ರಿ ಯ ಸಂಚಾಲಕ ಕದ್ರಿ ನವನೀತ ಶೆಟ್ಟಿ ಹಾಗೂ ಪ್ರದೀಪ ಆಳ್ವ ಕದ್ರಿ ತಿಳಿಸಿದ್ದಾರೆ.ಕದ್ರಿ ವಿಷ್ಣು ಅವರು ಕಟೀಲು ಮೇಳದ ಪ್ರಧಾನ ಕಲಾವಿದರಾಗಿದ್ದು, ತೆಂಕುತಿಟ್ಟಿನ ಪ್ರಾತಿನಿಧಿಕ ರಾಜವೇಷಧಾರಿಯಾಗಿ ಯಕ್ಷ ವಲಯದಲ್ಲಿ ಗುರುತಿಸಲ್ಪಡುವವರು.
ಶ್ರೀ ದೇವೀ ಮಹಾತ್ಮೆಯ ರಕ್ತಬೀಜಾಸುರ ಪಾತ್ರಕ್ಕೆ ಸ್ವರೂಪ ನೀಡಿದವರು. ಇಂದ್ರಜಿತು,ತಾಮ್ರಧ್ವಜ,ಋತುಪರ್ಣ,ಅರ್ಜುನ,ಹಿರಣ್ಯಾಕ್ಷ ಪಾತ್ರಗಳಲ್ಲಿ ಬಯಲಾಟ ಮೇಳದ ಆಟ, ಜೋಡಾಟಗಳಲ್ಲಿ ವಿಜೃಂಭಿಸಿದ ಮೇರು ಕಲಾವಿದರು.
ಕನ್ನಡಿಕಟ್ಟೆ ಯವರು ಕಳೆದ 14 ವರ್ಷಗಳಿಂದ ಕಟೀಲು ಮೇಳದಲ್ಲಿ ಕಲಾವ್ಯವಸಾಯ ಮಾಡುತ್ತಿದ್ದಾರೆ.
ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ದಿವಾಣ ಶಿವಶಂಕರ ಭಟ್ಚ ರ ನಿರ್ದೇಶನದಲ್ಲಿ ನಾಟ್ಯಾಭ್ಯಾಸ ಮಾಡಿ ಪೆರ್ಮುದೆ ಜಯ ಪ್ರಕಾಶ,ವಾಸುದೇವ ರಂಗ ಭಟ್ಟರ ಮಾರ್ಗದರ್ಶನದಲ್ಲಿ ತಾಳಮದ್ದಳೆಯ ಅರ್ಥಧಾರಿಯಾಗಿ ರೂಪುಗೊಂಡವರು.
ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಪೆರುವಾಯಿ ನಾರಾಯಣ ಶೆಟ್ಟಿ ಮುಂತಾದ ಹಿರಿಯ ಕಲಾವಿದರ ಒಡನಾಟದಲ್ಲಿ ಅಲ್ಪಾವಧಿಯಲ್ಲಿ ಎದುರು ವೇಷಾಧಾರಿಯಾಗಿ ರೂಪುಗೊಂಡವರು.ರಕ್ತಬೀಜಾಸುರ, ಜಾಬಾಲಿ, ಅರುಣಾಸುರ, ಹಿರಣ್ಯಕಶಿಪು, ವಾಲಿ, ವಾಲ್ಮೀಕಿ ಮೊದಲಾದ ಪಾತ್ರಗಳಿಗೆ ತನ್ನದೇ ಆದ ರೂಪ ನೀಡಿದ ಕ್ರಿಯಾಶೀಲ ರಂಗಕರ್ಮಿ.
ಡಿಸೆಂಬರ್ 10ರ _ಗುರುವಾರ ಕದ್ರಿ ದೇವಸ್ಥಾನದಲ್ಲಿ ನಡೆಯಲಿರುವ ಕಟೀಲು ಮೇಳದ ಸೇವೆ ಆಟದ ಸಂದರ್ಭದಲ್ಲಿ ಪ್ರಶಸ್ತಿ ವಿತರಿಸಲಾಗುವುದು.