ಕಡಬ: ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ಕಟ್ಟ ಎಂಬಲ್ಲಿ ಬಟ್ಟೆ ವ್ಯಾಪಾರಿಗಳ ಸೋಗಿನಲ್ಲಿ ಬಂದ ಇಬ್ಬರು ದಲಿತ ಮಹಿಳೆಯ ಮಾನಭಂಗ ಯತ್ನ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ವಿರೋಧ ಪಕ್ಷಗಳು ಆರೋಪಿಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಹೇಳಿದರು.
ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾಡಿನ ಬಳಿ ಇರುವ ದೈವನರ್ತಕ ಸಮುದಾಯದ ಒಂಟಿ ಮನೆಗೆ ಬಂದು ಮಹಿಳೆಯೋರ್ವಳೆ ಇರುವುದನ್ನು ಗಮನಿಸಿ, ಹಣ ಇಲ್ಲದಿದ್ದರೂ ಪರವಾಗಿಲ್ಲ ಬಟ್ಟೆ ಕೊಡ್ತೇವೆ,
ನಮ್ಮೊಂದಿಗೆ ಮಲಗಿ ಸಹಕರಿಸಿದರೆ ಸಾಕು ಎಂದು ವ್ಯಾಪಾರಿ ದುಷ್ಕರ್ಮಿಗಳು ಹೇಳಿದ್ದಲ್ಲದೇ, ಮಹಿಳೆ ಒಪ್ಪದಿದ್ದಾಗ ದುಡ್ಡಿನ ಆಮಿಷವೊಡ್ಡಿದಾಗಲೂ ಮಹಿಳೆ ಒಪ್ಪದಿದ್ದಾಗ ಆಕೆಯ ಮೈಮೇಲೆ ಕೈಹಾಕಿ ಲೈಂಗಿಕ ದೌರ್ಜನ್ಯ ನಡೆಸಿ, ಅತ್ಯಾಚಾರಕ್ಕೆ ಯತ್ನಿಸಿದ್ದರು.
ಆದರೆ ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಸೇರಿದಂತೆ ಕೆಲವು ಸಂಘಟನೆಗಳು ಈ ಘಟನೆಯನ್ನು ರಾಜಕೀಯಗೊಳಿಸಿ ದಲಿತ ಮಹಿಳೆಯ ಅತ್ಯಾಚಾರ ಯತ್ನವನ್ನು ತಿರುಚಿ ದುಷ್ಕರ್ಮಿಗಳನ್ನು ಬೆಂಬಲಿಸಿ ಸುಳ್ಳು ಆರೋಪಗಳನ್ನು ಮಾಡುತ್ತಿರುವುದನ್ನು ಬಿಜೆಪಿ ಖಂಡಿಸುತ್ತದೆ.
ವ್ಯಾಪಾರದ ಸೋಗಿನಲ್ಲಿ ಬಂದು ದಲಿತ ಮಹಿಳೆಯನ್ನು ಅತ್ಯಾಚರಕ್ಕೆ ಯತ್ನಿಸಿದ ಇಬ್ಬರೂ ದುಷ್ಕರ್ಮಿಗಳ ವಿರುದ್ಧ ಕೇಸು ದಾಖಲಾಗಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಂಡು ಜೈಲಿಗಟ್ಟಬೇಕೆಂದು ಸುಳ್ಯ ಬಿಜೆಪಿ ಸಮಿತಿ ಆಗ್ರಹಿಸುತ್ತದೆ ಎಂದರು.