ಮಂಗಳೂರು/ ಉ.ಪ್ರ : ಸಾಮಾನ್ಯವಾಗಿ ನಾಯಿ ಕಾಣೆಯಾದಾಗ ಮನೆ ಮಂದಿ ಹುಡುಕಾಡುತ್ತಾರೆ. ಅಲ್ಲಲ್ಲಿ ಮಿಸ್ಸಿಂಗ್ ಎಂಬ ಕರ ಪತ್ರಗಳನ್ನು ಅಂಟಿಸಿ ಹುಡುಕಾಟದ ಕಾರ್ಯದಲ್ಲಿ ತೊಡಗುತ್ತಾರೆ. ಆದ್ರೆ, ಇಲ್ಲಿ ನಾಯಿ ನಾಪತ್ತೆ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಅಲ್ಲದೇ, ಈ ಪ್ರಕರಣ ಸಂಬಂಧ ಹಲವರ ಮೇಲೆ ಎಫ್ ಐ ಆರ್ ಕೂಡಾ ದಾಖಲಾಗಿದೆ.
ನಾಪತ್ತೆಯಾಯ್ತು ನ್ಯಾಯಾಧೀಶರ ನಾಯಿ :
ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ. ನ್ಯಾಯಾಧೀಶರ ನಾಯಿಯೊಂದು ನಾಪತ್ತೆಯಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ. ನಾಯಿಯನ್ನು ಹುಡುಕಲು ಪೊಲೀಸರು ತಂಡಗಳನ್ನು ರಚಿಸಿದ್ದಾರೆ. ಈ ಬಗ್ಗೆ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ನಾಯಿ ಮಾತ್ರ ಇನ್ನೂ ಪತ್ತೆಯಾಗದಿರುವುದು ನ್ಯಾಯಾಧೀಶರ ಕುಟುಂಬ ಆತಂಕದಲ್ಲಿದೆ.
ಹಲವರ ವಿರುದ್ಧ ಕೇಸ್ :
ಬರೇಲಿಯ ಇಜ್ಜತ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಿವಿಲ್ ನ್ಯಾಯಾಧೀಶ ವಿಶಾಲ್ ದೀಕ್ಷಿತ್ ಅವರ ನಾಯಿ ಮೇ 18 ರಂದು ಅವರ ಮನೆಯ ಹೊರಗೆ ನಡೆದಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನಾಯಿ ಕಾಣೆಯಾಗಿದೆ. ನಾಯಿ ನಾಪತ್ತೆಯಾಗಿ ಈಗಾಗಲೇ ಐದು ದಿನಗಳು ಕಳೆದಿವೆ. ಈ ಬಗ್ಗೆ ದೂರು ನೀಡಿರುವ ನ್ಯಾಯಾಧೀಶರ ಪತ್ನಿ, ನೆರೆಹೊರೆಯವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 15 ಜನರ ವಿರುದ್ಧ ಕೇಸ್ ದಾಖಲಾಗಿದೆ. ಈಗಾಗಲೇ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಏನಿದು ಜಗಳ?
ಮೇ 16ರ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ನ್ಯಾಯಾಧೀಶರ ಹಾಗೂ ನೆರೆಹೊರೆಯ ನಿವಾಸಿ ಡಂಪಿ ಅಹ್ಮದ್ ಕುಟುಂಬ ಸದಸ್ಯರ ನಡುವೆ ವಾಗ್ವಾದ ನಡೆದಿತ್ತು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಈ ವೇಳೆ ನ್ಯಾಯಾಧೀಶರ ನಿವಾಸದಲ್ಲಿದ್ದ ನಾಯಿಯು, ಡಂಪಿ ಅಹ್ಮದ್ ಕುಟುಂಬ ಸದಸ್ಯರ ಮೇಲೆ ದಾಳಿ ನಡೆಸಿತ್ತು.
ಬಳಿಕ ಅದೇ ಕಾಲೊನಿಯಲ್ಲಿ ವಾಸವಿರುವ ಡಂಪಿ ಅಹ್ಮದ್ ಪುತ್ರ ಖಾದಿರ್ ಖಾನ್, ನ್ಯಾಯಾಧೀಶರ ಕುಟುಂಬದ ಸದಸ್ಯರ ಜತೆ ಜಗಳ ಕಾದಿದ್ದಲ್ಲದೇ, ಕೊಲೆ ಮಾಡುವ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ.
ಇದನ್ನೂ ಓದಿ : ಇಳಕಲ್ ನಲ್ಲಿ ನಡೆಯಿತು ಅಚ್ಚರಿ ಘಟನೆ; ಅಂ*ತ್ಯಸಂಸ್ಕಾರದ ವೇಳೆ ಕೆಮ್ಮಿದ ಮಗು!
ಮೇ 16ರ ರಾತ್ರಿ 9.45ರ ಸುಮಾರಿಗೆ ನ್ಯಾಯಾಧೀಶರ ಮನೆಗೆ ಬಂದಿದ್ದ ಡಂಪಿ ಅಹ್ಮದ್‌ನ ಪತ್ನಿ, ಅವರ ಜತೆ ಮಾತನಾಡಲು ಪಟ್ಟು ಹಿಡಿದಿದ್ದರು. ಅವರ ನಾಲ್ಕು ತಿಂಗಳ ನಾಯಿ ತಮ್ಮ ಮಗಳು ಹಾಗೂ ತಮ್ಮ ಮೇಲೆ ದಾಳಿ ನಡೆಸಿತ್ತು ಎಂಬ ಕಾರಣಕ್ಕೆ ನ್ಯಾಯಾಧೀಶರ ಕುಟುಂಬದ ವಿರುದ್ಧ ಕೋಪಗೊಂಡಿದ್ದರು. ಬಳಿಕ ನಾಯಿ ವಿಚಾರವಾಗಿ ವಾಗ್ವಾದ ನಡೆದಿತ್ತು ಎನ್ನಲಾಗಿದೆ.
ಇದೀಗ ನಾಯಿ ನಾಪತ್ತೆಯಾಗಿದ್ದು, ಪಕ್ಕದ ಮನೆಯವರು ಹಾಗೂ ಅವರ ಸಂಬಂಧಿಕರು ಈ ಕೃತ್ಯ ಎಸಗಿದ್ದಾರೆ ಎಂದು ದೂರು ನೀಡಲಾಗಿದೆ.