ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡಿಸೆಂಬರ್ 5ರಿಂದ ಜಿಲ್ಲೆಯಾದ್ಯಂತ ಮೆದುಳು ಜ್ವರ ಬಾರದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಶಾಲೆಗಳಲ್ಲೂ ಜೆಇ ಲಸಿಕಾ ಅಭಿಯಾನ ಮೂರು ವಾರಗಳ ಕಾಲ ನಡೆಯಲಿದ್ದು, ಎಲ್ಲಾ ಮಕ್ಕಳಿಗೂ ಹಾಕಿಸಲಾಗುವುದು ಹಾಗೂ ಪೋಷಕರು ಇದಕ್ಕೆ ಸಹಕಾರ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಕಿಶೋರ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಬಂಟ್ವಾಳದಲ್ಲಿ 758, ಬೆಳ್ತಂಗಡಿಯಲ್ಲಿ 522, ಮಂಗಳೂರಿನಲ್ಲಿ 1387, ಪುತ್ತೂರಿನಲ್ಲಿ 572, ಸುಳ್ಯದಲ್ಲಿ 275 ಹೀಗೆ ಒಟ್ಟು 3514 ಕೇಂದ್ರಗಳಲ್ಲಿ 4, 73,770 ಮಕ್ಕಳಿಗೆ ಜೆಇ ಲಸಿಕಾ ಅಭಿಯಾನ ಗುರಿ ಇರಿಸಲಾಗಿದೆ ಎಂದರು.
1ರಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಹಮ್ಮಿಕೊಳ್ಳಲಾಗಿದೆ. ಮೊದಲನೇ ವಾರದಲ್ಲಿ ಎಲ್ಲಾ ಶಾಲೆಗಳಲ್ಲಿ ಲಸಿಕಾ ಕೇಂದ್ರಗಳನ್ನು ಆಯೋಜಿಸಿ ಲಸಿಕಾಕರಣ ನಡೆಸಲಾಗುವುದು.
ನಂತರ ಎರಡು ವಾರಗಳಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳಲ್ಲಿ ಈ ಲಸಿಕಾಕರಣ ನಡೆಸಲಾಗುತ್ತದೆ. ಮಕ್ಕಳಿಗೆ ತೊಡೆಗೆ ಮತ್ತು ದೊಡ್ಡವರಿಗೆ ತೋಳಿಗೆ ಚುಚ್ಚುಮದ್ದು ನೀಡಲಾಗುತ್ತದೆ. 2018, 19 ಮತ್ತು 20ರಲ್ಲಿ ಹೀಗೆ ಮೂರು ವರ್ಷಗಳಲ್ಲಿ ಮೂರುಪ್ರಕರಣ ಪತ್ತೆಯಾಗಿತ್ತು ಎಂದರು.
ಇದನ್ನು ಮೆದುಳು ಜ್ವರ ಬಾರದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನೀಡಲಾಗುತ್ತದೆ. ಕರ್ನಾಟಕದ 10 ಜಿಲ್ಲೆಗಳಲ್ಲಿ ಈಗಾಗಲೇ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ 9 ಮತ್ತು 16 ತಿಂಗಳ ಮಕ್ಕಳಿಗೆ ಎರಡು ಡೋಸ್‌ಗಳಾಗಿ ನೀಡಲಾಗುತ್ತದೆ ಎಂದರು. 2006ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಜೆಇ ಚುಚ್ಚುಮದ್ದು ನೀಡಲಾಗಿತ್ತು.
ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಸೇರಿ ಉಡುಪಿ, ಯಾದಗಿರಿ, ಕಲಬುರಗಿ, ಗದಗ್, ಹಾವೇರಿ, ಕೂರ್ಗ್, ಬಾಗಲಕೋಟೆ, ಹಾಸನ , ರಾಮನಗರ ಹೀಗೆ 10 ಜಿಲ್ಲೆಗಳಲ್ಲಿ ಅಭಿಯಾನ ಆರಂಭಗೊಂಡಿದೆ. ವ್ಯಾಕ್ಸಿನ್ ನೀಡುವ ಮೂಲಕ ಈ ಖಾಯಿಲೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿದೆ ಎಂದರು.