ಮಂಗಳೂರು: ತರಾತುರಿಯಲ್ಲಿ ಬೆಲೆ ಏರಿಕೆ ಮಾಡುವುದು ಸರಿಯಲ್ಲ. ಹಾಗೆಯೇ ಜನಸಾಮಾನ್ಯರಿಗೆ ಹಾಗೂ ಚಾಲಕರಿಗೆ ಅನ್ಯಾಯವಾಗದ ರೀತಿಯಲ್ಲಿ ಬೆಲೆ ಪರಿಷ್ಕರಣೆಗೆ ಕ್ರಮ ಕೈಗೊಳ್ಳಲಾಗಬೇಕು. ಜಿಲ್ಲೆಯ ಆಟೋ ಹಾಗೂ ಟ್ರಕ್ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಕರೆ ನೀಡಿದರು.
ಅವರು ನಿನ್ನೆ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಟೋ ರಿಕ್ಷಾ ಹಾಗೂ ಟ್ರಕ್ ಚಾಲಕ-ಮಾಲಕರ ಕುಂದುಕೊರತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಟೋ ನಿಲ್ದಾಣ ಇಲ್ಲದ ಪ್ರದೇಶಗಳಲ್ಲಿ ಇತರೆ ವಾಹನಗಳಿಗೆ ಹಾಗೂ ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವ್ಯವಸ್ಥಿತ ನಿಲ್ದಾಣ ನಿರ್ಮಾಣಕ್ಕೆ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು.
ಆಟೋ ಹಾಗೂ ಟ್ರಕ್ ಚಾಲಕರು ಶಿಸ್ತುಬದ್ಧವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವುದರೊಂದಿಗೆ ಇತರೆ ಜಿಲ್ಲೆಯ ಚಾಲಕರಿಗೆ ಮಾದರಿಯಾಗಬೇಕು, ಟ್ರಕ್‍ಗಳಲ್ಲಿ ಓವರ್ ಲೋಡಿಂಗ್ ಮಾಡುವುದು ಕಾನೂನಿನ ಸ್ಪಷ್ಟ ಉಲ್ಲಂಘನೆ, ಇದರಿಂದ ರಸ್ತೆಗಳು ಕೂಡ ಹಾಳಾಗುತ್ತದೆ, ಓವರ್ ಲೋಡ್ ಮಾಡುವ ಟ್ರಕ್ ಚಾಲಕ – ಮಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿ ಹಾಗೂ ಜೋಕಟ್ಟೆಯಲ್ಲಿ ಸ್ಥಳ ನಿಗದಿಯಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು, ಟ್ರಕ್ ಚಾಲಕ ಮಾಲಕರಿಗೆ ಕಿರುಕುಳ ನೀಡುತ್ತಿದ್ದರೆ ಅಂತಹವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ವರ್ಣೇಕರ್, ಆಟೋ ಚಾಲಕ-ಮಾಲಕ ಸಂಘದ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ, ಟ್ರಕ್ ಅಸೋಸಿಯೇಶನ್ ಅಧ್ಯಕ್ಷ ಸುನಿಲ್ ಡಿ’ಸೋಜ, ಗೌರವ ಸಲಹೆಗಾರ ಬಿ.ಎಸ್. ಚಂದ್ರು, ಪ್ರಧಾನ ಕಾರ್ಯದರ್ಶಿ ಸುಶಾಂತ್ ಶೆಟ್ಟಿ ಹಾಗೂ ಇತೆರೆ ಅಧಿಕಾರಿಗಳು ಮತ್ತು ಟ್ರಕ್, ಆಟೋ ಚಾಲಕ-ಮಾಲಕರು ಉಪಸ್ಥಿತರಿದ್ದರು.