ಮಕ್ಕಳನ್ನು ಹೆರುದು ಮಾತ್ರವಲ್ಲದೆ, ಅವರ ಬೆಳೆವಣಿಗೆಯ ಬಗ್ಗೆ ಪೋಷಕರು ಹೆಚ್ಚು ಗಮನ ನೀಡುವುದು ಪೋಷಕರ ಕರ್ತವ್ಯ. ಪ್ರಸ್ತುತ ಕಾಲಘಟ್ಟದಲ್ಲಿ ತಂದೆ ತಾಯಿ ಇಬ್ಬರೂ ಉದ್ಯೋಗಸ್ಥರಾಗಿರುವ ಕಾರಣ ಮಕ್ಕಳಿಗೆ ಸಮಯ ನೀಡುವುದೇ ಕಷ್ಟವಾಗುತ್ತಿದೆ. ಇದು ಮಗುವಿನ ಭವಿಷ್ಯದ ಮೇಲೆ ದುಷ್ಪರಿಣಾಮವನ್ನುಂಟುಮಾಡುತ್ತದೆ. ಬಾಲ್ಯದಲ್ಲಿ ಮಕ್ಕಳಿಗೆ ಏನೇ ಕಲಿಸಿದರೂ ಆ ವಿಷಯಗಳನ್ನು ಬೇಗನೇ ಕಲಿತುಕೊಂಡು ಬಿಡುತ್ತಾರೆ. ಹಾಗಾಗಿ ಮಗುವಿಗೆ 13 ವರ್ಷ ತುಂಬುವ ಮೊದಲೇ ಜೀವನಕ್ಕೆ ಬಹಳ ಅಗತ್ಯವಿರುವ ಈ ವಿಷಯಗಳ ಬಗ್ಗೆ ಕಲಿಸಿಕೊಡುವುದು ತುಂಬಾ ಮುಖ್ಯ.
ಹಣದ ಬಗೆಗೆ ಜ್ಞಾನ :
ಈಗಿನ ಮಕ್ಕಳಿಗೆ ಹಣದ ಬೆಲೆ ಗೊತ್ತಿಲ್ಲ, ಹೀಗಾಗಿ ಈ ಬಗ್ಗೆ ಹೇಳಿಕೊಡುವುದು ಬಹಳ ಮುಖ್ಯ. ಭವಿಷ್ಯಕ್ಕಾಗಿ ಹಣವನ್ನು ಹೇಗೆ ಉಳಿತಾಯ ಮಾಡುವುದು, ಹಣವನ್ನು ಹೇಗೆ ಖರ್ಚು ಮಾಡುವುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಹೇಳಿಕೊಡಬೇಕು. ಇದರಿಂದ ಮಕ್ಕಳು ಬೇಕಾಬಿಟ್ಟಿ ಹಣ ಖರ್ಚು ಮಾಡುವುದು ತಪ್ಪುತ್ತದೆ ಹಾಗೂ ಹಣ ನಿರ್ವಹಣೆ ಹೇಗೆ ಮಾಡುವುದೆನ್ನುವ ಬಗ್ಗೆ ತಿಳಿಯುತ್ತದೆ.
ಸ್ವಚ್ಛತೆಯ ಬಗೆಗೆ ಮಾಹಿತಿ :
ಮಕ್ಕಳ ವಯಸ್ಸು 13 ತುಂಬುವ ಮೊದಲೇ ಸ್ವಚ್ಛತೆಯ ಬಗ್ಗೆ ಹೇಳಿಕೊಡುವುದು ಅತ್ಯವಶ್ಯಕ. ಮನೆಯನ್ನು ಹೇಗೆ ಅಚ್ಚು ಕಟ್ಟಾಗಿ ಇಡಬೇಕು ಹಾಗೂ ಶುಚಿಗೊಳಿಸುವುದನ್ನು ಕಲಿಸಿಕೊಡಬೇಕು. ಅದಲ್ಲದೇ ವೈಯುಕ್ತಿಕ ಸ್ವಚ್ಛತೆಯ ಬಗ್ಗೆ ತಿಳಿ ಹೇಳಬೇಕು. ಮಕ್ಕಳಿಗೆ ಈ ಬಗ್ಗೆ ತಿಳಿಸಿಕೊಟ್ಟರೆ ಮನೆ ಹಾಗೂ ತನ್ನ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.
ಸಮಯ ನಿರ್ವಹಣೆಯ ಕುರಿತು ಅರಿವು :
ಈಗಿನ ಕಾಲದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಸಾಲುವುದಿಲ್ಲ. ಹೀಗಾಗಿ ಸಣ್ಣ ವಯಸ್ಸಿನಲ್ಲಿಯೇ ಮಗುವಿಗೆ ಸಮಯ ನಿರ್ವಹಣೆಯ ತಿಳಿಸಿಕೊಡಿ. ಯಾವ ಕೆಲಸಗಳಿಗೆ ಎಷ್ಟು ಆದ್ಯತೆ ನೀಡಬೇಕು, ಇರುವ ಸ್ವಲ್ಪ ಸಮಯದಲ್ಲಿ ಕೆಲಸವನ್ನು ಹೇಗೆ ಮಾಡಿ ಮುಗಿಸುವುದು ಹಾಗೂ ವೇಳಾ ಪಟ್ಟಿ ರಚಿಸುವುದು ಹೇಗೆ ಈ ಕುರಿತು ಹೇಳಿಕೊಟ್ಟರೆ, ಮಕ್ಕಳು ಬೆಳೆಯುತ್ತ ದೊಡ್ಡವರಾಗುತ್ತಿದ್ದಂತೆ ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುತ್ತಾರೆ.
ಭಾವನೆಗಳ ನಿಯಂತ್ರಣ :
ಕೆಲ ಮಕ್ಕಳು ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದಾಗಿ ತೆಗೆದುಕೊಳ್ಳುತ್ತಾರೆ. ಇಲ್ಲವಾದರೆ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸುವುದೇ ಇಲ್ಲ. ಮಗುವಿನ ವಯಸ್ಸು 13 ದಾಟುವ ಮುನ್ನ ಈ ಬಗ್ಗೆ ತಿಳಿಸಿಕೊಡಬೇಕಾದದ್ದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ. ಈ ಸೂಕ್ಷ್ಮ ವಿಷಯಗಳು ಭಾವನೆಗಳನ್ನು ಹಂಚಿಕೊಳ್ಳಲು ಹಾಗೂ ಸನ್ನಿವೇಶಕ್ಕೆ ತಕ್ಕಂತೆ ನಿಯಂತ್ರಿಸಲು ಸಾಧ್ಯವಾಗುತ್ತದೆ.
ಜವಾಬ್ದಾರಿಗಳ ನಿರ್ವಹಣೆ :
ಸಣ್ಣ ವಯಸ್ಸಿನಲ್ಲಿ ಮಗುವಿಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವಂತೆ ಹೇಳಿ, ಅದರ ಸಂಪೂರ್ಣ ಜವಾಬ್ದಾರಿಯನ್ನು ಅವರ ಹೆಗಲಿಗೆ ಹಾಕಿ ಬಿಡಿ. ಒಂದು ವೇಳೆ ಜವಾಬ್ದಾರಿಯನ್ನು ನಿಭಾಯಿಸುವ ವೇಳೆ ಏನಾದರೂ ತಪ್ಪಾದರೆ ಕ್ಷಮೆ ಕೇಳಬೇಕು ಎಂದು ಹೇಳುವುದನ್ನು ಮರೆಯದಿರಿ. ಮಾಡಿದ ತಪ್ಪನ್ನು ತಿದ್ದಿಕೊಂಡು ಮತ್ತೊಮ್ಮೆ ಕೆಲಸದ ವಿಚಾರದಲ್ಲಿ ಆ ತಪ್ಪುಗಳು ಆಗದಂತೆ ನೋಡಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಈ ಜೀವನ ಪಾಠದಿಂದ ದೊಡ್ಡವರಾಗುತ್ತಿದ್ದಂತೆ ಅವರವರ ಜವಾಬ್ದಾರಿಯನ್ನು ಹೇಗೆ ನಿಭಾಯಿಸುವುದು ಎನ್ನುವ ಬಗ್ಗೆ ಸ್ವತಃ ಅವರಿಗೆ ತಿಳಿಸಿದಂತಾಗುತ್ತದೆ.