ಚಿಕ್ಕಮಗಳೂರು: ಶೃಂಗೇರಿ ಶ್ರೀಗಳಿಗೆ ಅಪಮಾನ ಮಾಡಿದ್ದ ವ್ಯಕ್ತಿಗೆ ಮೂರು ವರ್ಷ ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ಶೃಂಗೇರಿ ನ್ಯಾಯಾಲಯ ತೀರ್ಪು ನೀಡಿದೆ.
ಶೃಂಗೇರಿ ಹಿಂದೂಸ್ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಶೃಂಗೇರಿ ಶ್ರೀ ಮಠದ ಗುರುಪರಂಪರೆ ಕುರಿತ ಮಾಹಿತಿ ನೀಡುವ ಪೋಸ್ಟ್ ಹಾಕಲಾಗಿತ್ತು. ಶೃಂಗೇರಿ ಶ್ರೀಗಳ ಫೋಟೋ ಇರುವ ಈ ಪೋಸ್ಟ್‌ಗೆ 2015ರ ನವೆಂಬರ್ 19ರಂದು ಹುಬ್ಬಳ್ಳಿ ಮೂಲದ ಮುನ್ನಾ ಅಜರ್ ಅವಾಚ್ಯ ಪದಗಳನ್ನು ಬಳಸಿ ಆಕ್ಷೇಪಾರ್ಹ ಕಮೆಂಟ್ ಹಾಕಿದ್ದ.
ಈ ಕುರಿತು ಶೃಂಗೇರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಶೃಂಗೇರಿ ಮಠದ ಭಕ್ತರು ಪ್ರತಿಭಟನೆ ನಡೆಸಿ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದರು.
ಈ ಬಗ್ಗೆ ತನಿಖೆ ಕೈಗೊಂಡ ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿ ಕೆಲವೇ ದಿನಗಳಲ್ಲಿ ಆರೋಪಿಯನ್ನು ಬಂಧಿಸಿದ್ದರು.
ಶೃಂಗೇರಿ ಠಾಣೆಯ ವೃತ್ತ ನಿರೀಕ್ಷಕರಾಗಿದ್ದ ಸುಧೀರ್ ಹೆಗ್ಡೆ ನೇತೃತ್ವದ ತನಿಖಾ ತಂಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು.
ಸುದೀರ್ಘ ವಿಚಾರಣೆಯ ನಡೆಸಿದ ಶೃಂಗೇರಿ ನ್ಯಾಯಾಲಯ ಆರೋಪಿ ಅಜರ್‌ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಆರೋಪಿಯ ವಿರುದ್ಧವಾಗಿ ವಕೀಲೆ ಹರೀಣಾಕ್ಷಿ ವಾದ ಮಂಡಿಸಿದ್ದರು.