ತುಮಕೂರು: ಐದಾರ್ ಜನ ಫ್ರೆಂಡ್ಸ್ ಮೊನ್ನೆ ಶುಕ್ರವಾರ ಸಂಜೆ 6ಗಂಟೆಗೆ ತುಮಕೂರು ನಗರದ ಗುಬ್ಬಿ ಗೇಟ್ ಬಳಿ ಇರೋ ಶೋರೂಂಗೆ ಹೋಗಿದ್ರು.
ಆ ಟೈಮಲ್ಲಿ ಇವ್ರ ಭಾಷೆ, ವೇಷ-ಭೂಷಣ ನೋಡಿ 10 ರೂಪಾಯಿಗೆ ಯೋಗ್ಯತೆ ಇಲ್ಲ ನಿಮ್ಗೆ ಕಾರ್ ತಗೊಳ್ಳೋಕೆ ಬರ್ತೀರಾ ಅಂತ ಶೋರೂಮ್ ಸಿಬ್ಬಂದಿ ಅವಮಾನ ಮಾಡ್ಬಿಟ್ರಂತೆ.
ಈ ಟೈಮಲ್ಲಿ ಅರ್ಧ ಗಂಟೇಲಿ ದುಡ್ಡು ತರ್ತೀನಿ ಕಾರ್ ಕೊಡ್ತೀಯಾ ಅಂತ ಕೇಳಿದ್ದಾರೆ ಕೆಂಪೇಗೌಡ.
ಮೊದ್ಲು ತಗೊಂಡ್ ಬನ್ನಿ ಹೋಗ್ರೀ ಅಂದಿದ್ದಾರೆ ಶೋರೂಂ ಸಿಬ್ಬಂದಿ. ಜಸ್ಟ್ ಅರ್ಧ ಗಂಟೆ, 10 ಲಕ್ಷದೊಂದಿಗೆ ಶೋರೂಂನಲ್ಲಿ ಕೆಂಪೇಗೌಡ ಌಂಡ್ ಟೀಮ್ ಪ್ರತ್ಯಕ್ಷ.
ಆ ನಂತ್ರ ಆಗಿದ್ದೇ ಈ ಸೀನು. ಅರ್ಧ ಗಂಟೆಲಿ 10 ಲಕ್ಷದೊಂದಿಗೆ ಬಂದ ಕೆಂಪೇಗೌಡ ಮತ್ತಾತನ ಸ್ನೇಹಿತ್ರು ಶೋರೂಂ ಸಿಬ್ಬಂದಿಗೆ ಅಕ್ಷರಶಃ ಬೆವರಿಳಿಸಿಬಿಟ್ಟಿದ್ದಾರೆ.
ಹಣ ಹೊಂದಿಸ್ಕೊಂಡ್ ಬಂದ್ಮೇಲೆ ಕಾರ್ ಕೊಟ್ರಾ ಅಂದ್ರೆ ಖಂಡಿತಾ.. ಇಲ್ಲ..
ಮುಂದಿನ ಎರಡ್ಮೂರು ದಿನದಲ್ಲಿ ಕಾರ್ ಕೊಡ್ತೀವಿ ಅಂದಿದ್ದಾರೆ. ರಾತ್ರಿ 10.30ರವರೆಗೂ ಚರ್ಚೆ ನಡೆಯುತ್ತೆ. ಕೊನೆಗೆ ಗಲಾಟೆ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತೆ.
ನಂತ್ರ ಅವಮಾನಿಸಿದ ಸಿಬ್ಬಂದಿಯಿಂದ ಗ್ರಾಹಕನಿಗೆ ತಪ್ಪಾಯಿತು ಎಂದು ಮುಚ್ಚಳಿಕೆ ಬರೆಸೋ ಮೂಲಕ ಪ್ರಕರಣ ಅಂತ್ಯ ಕಂಡಿದೆ.
ನಮ್ಮನ್ನು ನೋಡಿ ಕೇವಲವಾಗಿ ಮಾತನಾಡಿದರು. 10 ರೂಪಾಯಿ ತರಲು ಯೋಗ್ಯತೆ ಇಲ್ಲ ಎಂದು ಅವಮಾನಿಸಿದರು.
ಆಗ ನಾವು ಅರ್ಧಗಂಟೆಯಲ್ಲಿ 10 ಲಕ್ಷ ಹೊಂದಿಸಿ ತಂದು ಕೊಟ್ಟಿದ್ದೀವಿ. ಕಳೆದ ಜನವರಿ 4 ರಂದು ಶೋರೂಮ್ಗೆ ಹೋಗಿ ಗೂಡ್ಸ್ ವಾಹನ ತರಲು ಹೇಳಿಬರಲಾಗಿತ್ತು. ಅದರಂತೆ ಮೊನ್ನೆ ಎರಡು ಲಕ್ಷ ಹಣ ಕಟ್ಟಿ ವಾಹನ ತರಲು ಶೋರೂಮ್ಗೆ ಹೋಗಿದ್ವಿ.
ಎರಡು ಲಕ್ಷ ಹಣ ಕಟ್ತೀವಿ. ವಾಹನ ಕೊಡಿ ಅಂತಾ ಕೇಳಿದ್ದೀವಿ. ಆಗ ಶೋರೂಮ್ ಸಿಬ್ಬಂದಿ ಏಳು ಜನರು ಕೂಡ ತಮಾಷೆ ಮಾಡಲು ಬಂದಿದ್ದೀರಾ. ವಾಹನ ತಗೊಂಡು ಹೋಗೊದಕ್ಕೆ ಬಂದಿಲ್ಲ. ನಿಮ್ಮ ಯೋಗ್ಯತೆಗೆ 10 ರೂಪಾಯಿ ಇಲ್ಲ, ಸುಮ್ಮನೇ ಬಂದಿದ್ದೀರಾ ಅಂತಾ ಅವಮಾನ ಮಾಡಿದ್ದರು.
25 ನಿಮಿಷ ಸಮಯ ಕೇಳಿದ್ದೀವಿ. ಆಗಲೂ ಅವರು ಕಿಚಾಯಿಸಿದ್ದಾರೆ. ನಾವು ಹೇಳಿದ ಸಮಯಕ್ಕೆ ಹಣ ತಂದು ಕೊಟ್ಟಿದ್ದೀವಿ. ಆದರೆ ಅವರು ವಾಹನ ನೀಡಲಿಲ್ಲ. ನಾವು ರೈತರು ಅಂತಾ ಅವಮಾನ ಮಾಡಿದ್ದಾರೆ ಅಂತಾ ಬೇಸರ ಹೊರಹಾಕಿದ್ದಾರೆ.