ಮಂಗಳೂರು: ನಗರದಲ್ಲಿ ಕರ್ನಾಟಕದ ಮೊದಲ ಸಿ ಬ್ಯಾಂಡ್ ಹವಾಮಾನ ರಾಡಾರ್(DWR) ಅಳವಡಿಕೆ ಕಾರ್ಯ ಕೆಲವೇ ದಿನಗಳಲ್ಲಿ ಸಂಪೂರ್ಣಗೊಳ್ಳಲಿದೆ. ತಾಂತ್ರಿಕ ತೊಂದರೆಗಳಿಂದ ಸ್ವಲ್ಪ ವಿಳಂಬವಾದರೂ ಜನವರಿ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರದ ಮುಖ್ಯಸ್ಥ ಎನ್ ಪುವಿಯರಸನ್ ತಿಳಿಸಿದ್ದಾರೆ.
ಇಲಾಖೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ TMD ಬೆಂಗಳೂರು ಶನಿವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಪುವಿಯರಸನ್ ಅವರು, ಆರಂಭದಲ್ಲಿ ಜನವರಿ 15 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದ್ದ ರಾಡಾರ್ ಈಗ ಈ ತಿಂಗಳ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲು ಪ್ರಾರಂಭಿಸುವ ಭರವಸೆ ಇದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದಲ್ಲಿ (KSNDMC) ಆಯೋಜಿಸಲಾದ ಕಾರ್ಯಾಗಾರವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಕೃಷಿ ಹವಾಮಾನ ವಿಭಾಗದ ಕೊಡುಗೆಗಳೊಂದಿಗೆ ಹಲವಾರು ಟೆಕ್ನಿಕಲ್ ಸೆಷನ್ಸ್ ಗಳನ್ನು ಒಳಗೊಂಡಿತ್ತು.
ಕಾರ್ಯಾಗಾರದಲ್ಲಿ ಬೆಂಗಳೂರಿನಲ್ಲಿ S-ಬ್ಯಾಂಡ್ DWR ಅನ್ನು ಸ್ಥಾಪಿಸುವಲ್ಲಿ ಐಎಂಡಿ ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಪುವಿಯರಸನ್ ಚರ್ಚಿಸಿದರು. ಯೋಜನೆಯು ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದೆ. ಏಕೆಂದರೆ ಐಎಂಡಿಗೆ ಟವರ್ ಮತ್ತು ಯುಟಿಲಿಟಿ ಕೋಣೆಗೆ 30×30 ಮೀಟರ್ ಪ್ಲಾಟ್ ಅಗತ್ಯವಿದೆ ಎಂದು ವಿವರಿಸಿದರು.
ಕದ್ರಿ ಬಳಿ ಸ್ಥಾಪಿಸಲಾಗುತ್ತಿರುವ ಮಂಗಳೂರು ರಾಡಾರ್ 250-300 ಕಿಮೀ ವ್ಯಾಪ್ತಿಯನ್ನು ಒಳಗೊಂಡಿದೆ. ಆಗುಂಬೆ, ಹುಲಿಕಲ್, ತಲಕಾವೇರಿ, ಕೆರೆಕಟ್ಟೆ ಮತ್ತು ಭಾಗಮಂಡಲ ಸೇರಿದಂತೆ ಮಾನ್ಸೂನ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವ ಕರ್ನಾಟಕದ ಪ್ರದೇಶಗಳಿಗೆ ವರ್ಧಿತ ಹವಾಮಾನ ಮುನ್ಸೂಚನೆಯನ್ನು ಒದಗಿಸುತ್ತದೆ. ಪುವಿಯರಸನ್ ಅವರು ಧಾರವಾಡದಲ್ಲಿ X-ಬ್ಯಾಂಡ್ DWR ಯೋಜನೆಗಳನ್ನು ಮತ್ತು ಹೊನ್ನಾವರದಲ್ಲಿ S-ಬ್ಯಾಂಡ್ ರಾಡಾರ್‌ಗಳು ಮತ್ತು ಬಳ್ಳಾರಿಯಲ್ಲಿ C-ಬ್ಯಾಂಡ್ ರಾಡಾರ್‌ಗಳ ಪ್ರಸ್ತಾಪವನ್ನು ಪ್ರಸ್ತಾಪಿಸಿದರು.
ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಯಾವುದೇ ಡಾಪ್ಲರ್ ರಾಡಾರ್ ಇರುವುದಿಲ್ಲ. ಈ ಹಿನ್ನೆಲೆ ಕರ್ನಾಟಕವು ನಿಖರ ಹವಾಮಾನ ಮುನ್ಸೂಚನೆಗಾಗಿ ಗೋವಾ, ಹೈದರಾಬಾದ್, ಚೆನ್ನೈಯ ರಾಡಾರ್‌ಗಳನ್ನು ಅವಲಂಬಿಸಿದೆ.
ಕಾರ್ಯಾಗಾರದಲ್ಲಿ KSNDMC ನಿರ್ದೇಶಕ ಭೋಯಾರ್ ಹರ್ಷಲ್ ನಾರಾಯಣರಾವ್ ಅವರು ಕರ್ನಾಟಕದ ನೈಸರ್ಗಿಕ ವಿಕೋಪಗಳ ದುರ್ಬಲತೆಯನ್ನು ಚರ್ಚಿಸಿದರು. ರಾಜ್ಯದಲ್ಲಿ ಶೇ.80ರಷ್ಟು ಬರಪೀಡಿತವಾಗಿದ್ದು, ಕಳೆದ 23 ವರ್ಷಗಳಲ್ಲಿ 16 ವರ್ಷ ಬರಗಾಲಕ್ಕೆ ತುತ್ತಾಗಿದೆ. ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಕೊಡಗಿನಂತಹ ಜಿಲ್ಲೆಗಳಲ್ಲಿ ಭೂಕುಸಿತದಿಂದ ವ್ಯಾಪಕ ಹಾನಿ ಉಂಟಾಗಿದೆ. 2018 ರಿಂದ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಭೂಕುಸಿತಗಳು ಸಂಭವಿಸಿವೆ ಎಂದರು.