Connect with us

    DAKSHINA KANNADA

    ಮಂಗಳೂರಿನಲ್ಲಿ ರಾಜ್ಯದ ಮೊದಲ ಸಿ ಬ್ಯಾಂಡ್ ಹವಾಮಾನ ರಾಡಾರ್ ಅಳವಡಿಕೆ

    Published

    on

    ಮಂಗಳೂರು: ನಗರದಲ್ಲಿ ಕರ್ನಾಟಕದ ಮೊದಲ ಸಿ ಬ್ಯಾಂಡ್ ಹವಾಮಾನ ರಾಡಾರ್(DWR) ಅಳವಡಿಕೆ ಕಾರ್ಯ ಕೆಲವೇ ದಿನಗಳಲ್ಲಿ ಸಂಪೂರ್ಣಗೊಳ್ಳಲಿದೆ. ತಾಂತ್ರಿಕ ತೊಂದರೆಗಳಿಂದ ಸ್ವಲ್ಪ ವಿಳಂಬವಾದರೂ ಜನವರಿ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರದ ಮುಖ್ಯಸ್ಥ ಎನ್ ಪುವಿಯರಸನ್ ತಿಳಿಸಿದ್ದಾರೆ.

    ಇಲಾಖೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ TMD ಬೆಂಗಳೂರು ಶನಿವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಪುವಿಯರಸನ್ ಅವರು, ಆರಂಭದಲ್ಲಿ ಜನವರಿ 15 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದ್ದ ರಾಡಾರ್ ಈಗ ಈ ತಿಂಗಳ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲು ಪ್ರಾರಂಭಿಸುವ ಭರವಸೆ ಇದೆ ಎಂದು ಹೇಳಿದರು.

    ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದಲ್ಲಿ (KSNDMC) ಆಯೋಜಿಸಲಾದ ಕಾರ್ಯಾಗಾರವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಕೃಷಿ ಹವಾಮಾನ ವಿಭಾಗದ ಕೊಡುಗೆಗಳೊಂದಿಗೆ ಹಲವಾರು ಟೆಕ್ನಿಕಲ್ ಸೆಷನ್ಸ್ ಗಳನ್ನು ಒಳಗೊಂಡಿತ್ತು.

    ಕಾರ್ಯಾಗಾರದಲ್ಲಿ ಬೆಂಗಳೂರಿನಲ್ಲಿ S-ಬ್ಯಾಂಡ್ DWR ಅನ್ನು ಸ್ಥಾಪಿಸುವಲ್ಲಿ ಐಎಂಡಿ ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಪುವಿಯರಸನ್ ಚರ್ಚಿಸಿದರು. ಯೋಜನೆಯು ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದೆ. ಏಕೆಂದರೆ ಐಎಂಡಿಗೆ ಟವರ್ ಮತ್ತು ಯುಟಿಲಿಟಿ ಕೋಣೆಗೆ 30×30 ಮೀಟರ್ ಪ್ಲಾಟ್ ಅಗತ್ಯವಿದೆ ಎಂದು ವಿವರಿಸಿದರು.

    ಕದ್ರಿ ಬಳಿ ಸ್ಥಾಪಿಸಲಾಗುತ್ತಿರುವ ಮಂಗಳೂರು ರಾಡಾರ್ 250-300 ಕಿಮೀ ವ್ಯಾಪ್ತಿಯನ್ನು ಒಳಗೊಂಡಿದೆ. ಆಗುಂಬೆ, ಹುಲಿಕಲ್, ತಲಕಾವೇರಿ, ಕೆರೆಕಟ್ಟೆ ಮತ್ತು ಭಾಗಮಂಡಲ ಸೇರಿದಂತೆ ಮಾನ್ಸೂನ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವ ಕರ್ನಾಟಕದ ಪ್ರದೇಶಗಳಿಗೆ ವರ್ಧಿತ ಹವಾಮಾನ ಮುನ್ಸೂಚನೆಯನ್ನು ಒದಗಿಸುತ್ತದೆ. ಪುವಿಯರಸನ್ ಅವರು ಧಾರವಾಡದಲ್ಲಿ X-ಬ್ಯಾಂಡ್ DWR ಯೋಜನೆಗಳನ್ನು ಮತ್ತು ಹೊನ್ನಾವರದಲ್ಲಿ S-ಬ್ಯಾಂಡ್ ರಾಡಾರ್‌ಗಳು ಮತ್ತು ಬಳ್ಳಾರಿಯಲ್ಲಿ C-ಬ್ಯಾಂಡ್ ರಾಡಾರ್‌ಗಳ ಪ್ರಸ್ತಾಪವನ್ನು ಪ್ರಸ್ತಾಪಿಸಿದರು.

    ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಯಾವುದೇ ಡಾಪ್ಲರ್ ರಾಡಾರ್ ಇರುವುದಿಲ್ಲ. ಈ ಹಿನ್ನೆಲೆ ಕರ್ನಾಟಕವು ನಿಖರ ಹವಾಮಾನ ಮುನ್ಸೂಚನೆಗಾಗಿ ಗೋವಾ, ಹೈದರಾಬಾದ್, ಚೆನ್ನೈಯ ರಾಡಾರ್‌ಗಳನ್ನು ಅವಲಂಬಿಸಿದೆ.

    ಕಾರ್ಯಾಗಾರದಲ್ಲಿ KSNDMC ನಿರ್ದೇಶಕ ಭೋಯಾರ್ ಹರ್ಷಲ್ ನಾರಾಯಣರಾವ್ ಅವರು ಕರ್ನಾಟಕದ ನೈಸರ್ಗಿಕ ವಿಕೋಪಗಳ ದುರ್ಬಲತೆಯನ್ನು ಚರ್ಚಿಸಿದರು. ರಾಜ್ಯದಲ್ಲಿ ಶೇ.80ರಷ್ಟು ಬರಪೀಡಿತವಾಗಿದ್ದು, ಕಳೆದ 23 ವರ್ಷಗಳಲ್ಲಿ 16 ವರ್ಷ ಬರಗಾಲಕ್ಕೆ ತುತ್ತಾಗಿದೆ. ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಕೊಡಗಿನಂತಹ ಜಿಲ್ಲೆಗಳಲ್ಲಿ ಭೂಕುಸಿತದಿಂದ ವ್ಯಾಪಕ ಹಾನಿ ಉಂಟಾಗಿದೆ. 2018 ರಿಂದ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಭೂಕುಸಿತಗಳು ಸಂಭವಿಸಿವೆ ಎಂದರು.

    DAKSHINA KANNADA

    ನಕ್ಸಲರ ಶರಣಾಗತಿ; ಈ ಪ್ರಕ್ರಿಯೆ ಮೊದಲೇ ನಡೆಯಬೇಕಿತ್ತು ಎಂದ ವಿಕ್ರಂ ಗೌಡನ ಸಹೋದರ

    Published

    on

    ನವೆಂಬರ್ 18 ರಂದು ನಡೆದಿದ್ದ ನಕ್ಸಲ್ ವಿಕ್ರಮ್ ಗೌಡ ಎನ್ಕೌಂಟರ್ ಬಳಿಕ ನಡೆದ ಬೆಳವಣಿಗೆಯಲ್ಲಿ ಇದೀಗ ಆರು ಜನ ನಕ್ಸಲರು ಮುಖ್ಯವಾಹಿನಿಗೆ ಕಾಲಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶರಣಾಗತಿ ಆಗುವ ಮೂಲಕ ನಕ್ಸಲ್ ಹೋರಾಟಕ್ಕೆ ಅಂತ್ಯ ಹಾಡಿದ್ದಾರೆ.

    ನಾಗರಿಕ ಸಮಿತಿ ಮತ್ತು ಶರಣಾಗತಿ ಸಮಿತಿ ಸರ್ಕಾರದ ಜೊತೆ ಮಾತುಕತೆ ನಡೆಸಿ ಈ ಶರಣಾಗತಿ ಮಾಡಿಸಿದ್ದಾರೆ. ಆದರೆ ಇದು ವಿಕ್ರಂ ಗೌಡ ಅವರ ಸಹೋದರ ಹಾಗೂ ಸಹೋದರಿಯರಿಗೆ ಬೇಸರ ತರಿಸಿದ್ದು, ನಮ್ಮ ಅಣ್ಣ ಜೀವಂತವಾಗಿದ್ದಾಗ ಈ ಪ್ರಕ್ರಿಯೆ ನಡೆಯಬೇಕಿತ್ತು ಎಂದಿದ್ದಾರೆ. ನಕ್ಸಲರು ಶರಣಾಗುತ್ತಿರುವುದು ಒಳ್ಳೆಯ ವಿಚಾರವಾಗಿದ್ದು, ಅವರೂ ನಮ್ಮಂತೆ ಜೀವಿಸಲಿ ಎಂದಿರುವ ಸಹೋದರ ಸುರೇಶ್ ಗೌಡ ಈ ಯೋಜನೆ ಮೊದಲೇ ತಂದಿದ್ದರೆ ನನ್ನ ಅಣ್ಣ ಕೂಡಾ ಬದುಕಿ ಉಳಿಯುತ್ತಿದ್ದ ಎಂದು ಹೇಳಿದ್ದಾರೆ.

    ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವಿಕ್ರಂ ಗೌಡ ಸಹೋದರಿ ಸುಗುಣ ನಕ್ಸಲ್ ಶರಣಾಗತಿ ಪ್ಯಾಕೇಜ್ ನಮಗೂ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಶರಣಾಗತಿಗೆ ಸಮಿತಿಯವರು ಮೊದಲೇ ಪ್ರಯತ್ನಿಸಿದ್ದರೆ ನನ್ನ ಅಣ್ಣನ ಜೀವ ಉಳಿಯುತ್ತಿತ್ತು. ಜೈಲಿನಲ್ಲಿಯಾದರೂ ಆತ ಇರುತ್ತಿದ್ದ. ಆದರೆ ಆತನನ್ನು ಎನ್ಕೌಂಟರ್ ಮಾಡಿದ ಕಾರಣ ಇಂದು ಆತ ನಮ್ಮೊಂದಿಗಿಲ್ಲ. ನಾವು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕಷ್ಟದ ಜೀವನ ನಡೆಸುತ್ತಿದ್ದೇವೆ. ನಮ್ಮನ್ನು ಯಾವ ಸಮಿತಿಯೂ ಬಂದು ಭೇಟಿ ಮಾಡಿಲ್ಲ. ನಮಗೂ ನಕ್ಸಲ್ ಶರಣಾಗತಿಯ ಪ್ಯಾಕೇಜ್ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    Continue Reading

    DAKSHINA KANNADA

    ಶರಣಾಗತಿಯಾದ ನಕ್ಸಲರು ಯಾರು ? ಇವರ ಹಿನ್ನಲೆ ಏನು ?

    Published

    on

    ಮಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಆದಿವಾಸಿಗಳಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಆರಂಭವಾದ ಹೋರಾಟ 3 ದಶಕಗಳ ಬಳಿಕ ಅಂತ್ಯ ಕಂಡಿದೆ. ಅನೇಕ ರಕ್ತಸಿಕ್ತ ಅಧ್ಯಾಯ ಬರೆದಿರುವ ಈ ಹೋರಾಟ ಇಂದು ಆರು ನಕ್ಸಲರ ಶರಣಾಗತಿಯೊಂದಿಗೆ ಮುಕ್ತಾಯವಾಗಿದೆ. ಇದರಿಂದಾಗಿ ಹಲವಾರು ಭಾರೀ ಗುಂಡಿನ ಮೊರೆತ ಕೇಳಿಸಿದ್ದ ಪಶ್ಚಿಮ ಘಟ್ಟದಲ್ಲಿ ಇನ್ನು ಮುಂದೆ ನೀರವ ಮೌನ ಕಾಡಲಿದೆ.

    ಶರಣಾಗತಿಯಾದ ನಕ್ಸಲರು ಯಾರು ? ಇವರ ಹಿನ್ನಲೆ ಏನು ?

    ಲತಾ ಮುಂಡಗಾರು:

    ಶೃಂಗೇರಿ ತಾಲೂಕಿನ ಲತಾ ಮುಂಡಗಾರು ಬಡ ಆದಿವಾಸಿ ದಂಪತಿಯ ದೊಡ್ಡ ಕುಟುಂಬದ ಹೆಣ್ಣುಮಗಳು. ಬಡತನ ಹಾಗೂ ಶಾಲೆಯ ಶಿಕ್ಷಕರ ಕಿರುಕುಳಗಳಿಂದಾಗಿ 6ನೇ ತರಗತಿಗೆ ಓದು ನಿಲ್ಲಿಸಿದರು. ಈಕೆ 2000 ಇಸವಿಯಲ್ಲಿ ತನ್ನ 18ನೇ ವಯಸ್ಸಿಗೇ ಕಾಡಿನ ದಾರಿ ಹಿಡಿದು ಕೈನಲ್ಲಿ ಬಂದೂಕು ಹಿಡಿದು ಆಧಿವಾಸಿಗಳ ಹಕ್ಕಿನ ಪರವಾಗಿ ಹೋರಾಟ ಮಾಡಿದ ನಕ್ಸಲ್ ನಾಯಕಿ ಲತಾ ಮುಂಡಗಾರು. ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯಲ್ಲಿ ಮನೆ ಕಳೆದುಕೊಳ್ಳುವ ಪರಿಸ್ಥಿತಿ ಬಂದಾಗ ಹೋರಾಟಕ್ಕೆ ದುಮುಕಿದವರು. ಆದ್ರೆ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬೆಲೆ ಸಿಗಲಿಲ್ಲ ಎಂಬ ಕಾರಣದಿಂದ ಸಶಸ್ತ್ರ ಹೋರಾಟಕ್ಕಾಗಿ ನಕ್ಸಲರಾಗಿ ಜೊತೆ ಸೇರಿ 25 ವರ್ಷಗಳಿಂದ ಕರ್ನಾಟಕ ಕೇರಳದಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಎಂಬ ಹಣೆ ಪಟ್ಟಿಕೊಟ್ಟಿಕೊಂಡಿದ್ದರು. ನೇತ್ರಾವತಿ ತಂಡದ ನಾಯಕತ್ವ ವಿಕ್ರಂ ಗೌಡ ವಹಿಸಿದ್ದರೆ ಭದ್ರಾ ತಂಡದ ನಾಯಕಿಯಾಗಿ ಮುಂಡಗಾರು ಲತಾ ಗುರುತಿಸಿಕೊಂಡಿದ್ದರು. ನವೆಂಬರ್ ತಿಂಗಳಲ್ಲಿ ವಿಕ್ರಂ ಗೌಡನ ಹತ್ಯೆಯ ಬಳಿಕ ನಡೆದ ಬೆಳವಣಿಗೆಗಳಲ್ಲಿ ಶರಣಾಗತಿ ಬಯಸಿದ ನಕ್ಸಲರಲ್ಲಿ ಇವರು ಪ್ರಮುಖ ನಕ್ಸಲ್ ನಾಯಕಿ.

    ಸುಂದರಿ ಕುತ್ಲೂರು:

     

    ಸುಂದರಿಯೂ ಸಹ ಲತಾ ರೀತಿಯಲ್ಲಿ ಆದಿವಾಸಿ ಮಹಿಳೆ. ಬಡತನ ಹಾಗೂ ಶಾಲೆ ದೂರವಿದ್ದುದರಿಂದ ಮೂರನೆಯ ತರಗತಿಯ ನಂತರ ಶಾಲೆ ತೊರೆದರು. ಇವರ ಕುಟುಂಬವೂ ಸಹ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯಿಂದಾಗಿ ತನ್ನ ಎಲ್ಲವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿದ್ದರು. ಪ್ರಜಾಸತ್ತಾತ್ಮಕ ಚಳುವಳಿ ಫಲ ನೀಡದೆಂದು ಕಂಡಾಗ ಆಗಿನ ಹಲವರು ಯುವಜನರಂತೆ ಸುಂದರಿಯೂ ಸಹ ಆಯುಧವನ್ನು ಕೈಗೆತ್ತಿಕೊಂಡರು. ತನ್ನ 19ನೇ ವಯಸ್ಸಿನಲ್ಲಿ 2004 ರಲ್ಲಿ ನಕ್ಸಲ್ ಹೋರಾಟಕ್ಕೆ ದುಮುಕಿದ್ದು, 20 ವರ್ಷಗಳಿಂದ ನಕ್ಸಲ್ ತಂಡದಲ್ಲಿದ್ದು ಮೋಸ್ಟ್‌ ವಾಂಟೆಡ್ ಲಿಸ್ಟ್‌ನಲ್ಲಿದ್ದಾರೆ. ತನ್ನ ಹಾಗೂ ನೆರೆಹೊರೆಯ ಕುಟುಂಬಗಳ ಮೇಲೆ ಪೊಲೀಸರು ನಡೆಸುತ್ತಿದ್ದ ದಾಳಿಗಳು ದೌರ್ಜನ್ಯಗಳನ್ನು ಇಂದಿಗೂ ನೋವಿನಿಂದ ನೆನಪಿಸಿಕೊಳ್ಳುವ ಸುಂದರಿ ತನ್ನ ಹೋರಾಟದ ಕೆಚ್ಚನ್ನು ಉಳಿಸಿಕೊಂಡಿದ್ದು ಇನ್ನು ಮುಂದೆ ಪ್ರಜಾತಾಂತ್ರಿಕ ಚಳುವಳಿಗಳ ಭಾಗವಾಗಲು ಮುಖ್ಯ ವಾಹಿನಿಯನ್ನು ಸೇರಬಯಸಿದ್ದಾರೆ.

    ವನಜಾಕ್ಷಿ:

    ಎಸ್ ಎಸ್ ಎಲ್ ಸಿ ವರೆಗೂ ಓದಿರುವ ವನಜಾಕ್ಷಿ ಈ ತಂಡದ ಅತಿ ಹಿರಿಯ ಸದಸ್ಯೆ. 1985 ರಲ್ಲಿ ಓದು ನಿಲ್ಲಿಸಿದ ಈ ಆದಿವಾಸಿ ಮಹಿಳೆ ತನ್ನ ಗ್ರಾಮದಲ್ಲಿ ಸಾರ್ವಜನಿಕ ಜೀವನದ ಭಾಗವಾಗಿ 1992 ಮತ್ತು 1997ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಎಂಟು ಜನ ಮಕ್ಕಳ ದೊಡ್ಡ ಕುಟುಂಬದ ಹೆಣ್ಣು ಮಗಳಾಗಿ ಟೈಪ್ ರೈಟಿಂಗ್ ಕಲಿತು, ಹೊಲಿಗೆಯನ್ನು ಜೀವ ಜೀವನಾಧಾರವಾಗಿಸಿಕೊಂಡರು. ರಾಜಕೀಯವಾಗಿ ಸಕ್ರಿಯವಾಗಿದ್ದರೂ ಸಹ ಇವರಿಗೆ ಮತ್ತು ಇವರ ಕುಟುಂಬಕ್ಕೆ ಬಲಾಢ್ಯರಿಂದ ತಮ್ಮ ತುಂಡುಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಪರಿಣಾಮವಾಗಿ ತಾಯಿ ಮಾನಸಿಕ ಅಸ್ವಸ್ಥತೆಗೆ ಗುರಿಯಾದರೆ ಒಬ್ಬ ತಮ್ಮ ಆತ್ಮಹತ್ಯೆಗೆ ಶರಣಾದ. ಅಲ್ಲದೆ ಸುತ್ತಮುತ್ತ ಇದ್ದ ಹಲವು ಕುಟುಂಬಗಳು ಸಹ ತಮ್ಮಂತೆ ಬಡತನ ಶೋಷಣೆಗಳಿಗೆ ಬಲಿಯಾಗುತ್ತಿದ್ದುದ್ದನ್ನು ಕಂಡ ವನಜಾಕ್ಷಿ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಕಳೆದುಕೊಂಡರು. ಸಶಸ್ತ್ರ ಹೋರಾಟವೇ ದಾರಿ ಎಂಬ ನಿರ್ಧಾರಕ್ಕೂ ಆ ಕಾಲದಲ್ಲಿ ನಡೆಯುತ್ತಿದ್ದ ಸಶಸ್ತ್ರ ಚಳುವಳಿಯ ಪ್ರಭಾವದಿಂದಾಗಿ ಬಂದರು. 2000 ನೇ ಇಸವಿಯಿಂದ ಮಾವೋವಾದಿ ಪಕ್ಷದ ಭಾಗವಾಗಿ ಕರ್ನಾಟಕ ಹಾಗೂ ಕೇರಳದಲ್ಲಿ ಸಂಚರಿಸುವ ದಳದ ಸದಸ್ಯೆಯಾಗಿದ್ದರು. ತನ್ನ ಹೋರಾಟವನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿಯೂ ಮುಂದುವರಿಸಬಹುದಾದ ಅವಕಾಶಗಳನ್ನು ಅರ್ಥ ಮಾಡಿಕೊಂಡು ಈಗ ಮುಖ್ಯವಾಹಿನಿಯ ಭಾಗವಾಗಲು ಸಿದ್ಧರಾಗಿದ್ದಾರೆ.

    ಜಯಣ್ಣ ಅರೋಲಿ:

    ಜಯಣ್ಣ ಆರೋಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅರೋಲಿ ಗ್ರಾಮದವರು. ಎರಡನೇಯ ಬಿಎ ವರೆಗೂ ಓದಿರುವ ದಲಿತ ಯುವಕ. ಕಾಲೇಜಿನಲ್ಲಿ ಇರುವಾಗಲೇ ಆ ಸಮಯದಲ್ಲಿ ಆ ಭಾಗದಲ್ಲಿ ನಡೆಯುತ್ತಿದ್ದ ಮಾವೋವಾದಿ ಚಳುವಳಿಯ ಕಡೆ ಆಕರ್ಷಿತರಾದರು. ಇದರ ಆಸಕ್ತಿಯಿಂದ ಚಳುವಳಿಯನ್ನು ಗಮನಿಸುತ್ತಿದ್ದ ಅವರಿಗೆ ಭಾಸ್ಕರ್ ಅವರ ಎನ್ಕೌಂಟರ್ ಹತ್ಯೆ ಆಘಾತವನ್ನುಂಟು ಮಾಡಿತು. 2000ನೇ ಇಸವಿಯಲ್ಲಿ ತನ್ನ 24ನೇ ವಯಸ್ಸಿನಲ್ಲಿ ದಳದ ಭಾಗವಾದರು. ಅಂದಿನಿಂದ ಕೇರಳ ಕರ್ನಾಟಕಗಳಲ್ಲಿ ಇವರ ಹೋರಾಟದ ಚಟುವಟಿಕೆಗಳು ನಡೆದಿದೆ. 2018 ರಲ್ಲಿ ಪುನಃ ಸಶಸ್ತ್ರ ಚಳುವಳಿಗೆ ಮರಳಿದರು. ಜನರ ಜೊತೆ ಸೇರಿ ಜನಪರ ಹೋರಾಟಗಳನ್ನು ನಡೆಸಲು ಮುಖ್ಯ ವಾಹಿನಿಯ ಭಾಗವಾಗಿ ಬಯಸಿದ್ದಾರೆ. ಸರ್ಕಾರ ಪ್ರಕಟಿಸಿರುವ ಪ್ಯಾಕೇಜ್ ಭಾಗವಾಗಿ ತಮಗೆ ಸಂದಾಯವಾಗಬಹುದಾದ ಹಣದ ಅರ್ಧ ಭಾಗವನ್ನು ತನ್ನ ಹಳ್ಳಿಯ ಶಾಲೆಯ ಅಭಿವೃದ್ಧಿಗಾಗಿ ನೀಡಬೇಕೆಂದು ತೀರ್ಮಾನಿಸಿದ್ದಾರೆ.

    ವಸಂತ್ ಆರ್ಕಾಟ್:

    ತಮಿಳುನಾಡಿನ ವೆಲ್ಲೂರಿನ ವಸಂತ್ ಬಿ ಟೆಕ್ ಪದವೀಧರ. ವೆಲ್ಲೂರು ಜಿಲ್ಲೆಯ ಆರ್ಕಾಟ್ ಅವರ ಊರು. ಸಮಾಜಮುಖಿ ಚಿಂತನೆಗಳಿಂದ ಪ್ರಭಾವಿತರಾದ ಇವರು ಹೋರಾಟಗಳನ್ನು ಗಮನಿಸುತ್ತಾ ಬೆಳೆದವರು. 2010ರಲ್ಲಿ ಪದವಿ ಮುಗಿಸಿದ ತಕ್ಷಣವೇ ಶಶಸ್ತ್ರ ಹೋರಾಟದ ಭಾಗವಾಗಿ ಅಂದಿನಿಂದಲೂ ಕೇರಳ ಕರ್ನಾಟಕಗಳಲ್ಲಿರುವ ದಳದ ಸದಸ್ಯರಾಗಿದ್ದರು. ಮಿತ ಭಾಷೆಯಾಗಿರುವ ವಸಂತ್ ತನ್ನ ಆದರ್ಶಗಳನ್ನು ಬಿಟ್ಟುಕೊಡದೆ ಹೋರಾಟದ ಮಾರ್ಗವನ್ನು ಬದಲಿಸಿ ಮುಖ್ಯವಾಹಿನಿಯನ್ನು ಸೇರಬಯಸಿದ್ದಾರೆ.

    ಜಿಶ:

    ಜಿಶ ತಂಡದಲ್ಲಿನ ಎಲ್ಲರಿಗಿಂತಲೂ ತುಂಬಾ ಚಿಕ್ಕವರು. ಕೇರಳದ ಜೀಶ ವಯನಾಡ್ ಜಿಲ್ಲೆಯ ಮಕ್ಕಿಮಲದ ಆದಿವಾಸಿ ಮಹಿಳೆ. ಎಂಟನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಿದರು. 2018ರಲ್ಲಿ ಕೇರಳದಲ್ಲಿ ಸಶಸ್ತ್ರ ಹೋರಾಟದ ಭಾಗವಾಗಿದ್ದು 2023ರಲ್ಲಿ ತಂಡದ ಇತರೆ ಸದಸ್ಯರೊಂದಿಗೆ ಕೇರಳದಿಂದ ಕರ್ನಾಟಕಕ್ಕೆ ಬಂದವರು.

    ಇದೀಗ ಆರು ಜನ ನಕ್ಸಲರು ಚಿಕ್ಕಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತರಾಗಿದ್ದಾರೆ. ಈ ಮೂಲಕ ಪಶ್ಚಿಮ ಘಟ್ಟದ ಕಾಡಿನಲ್ಲಿ ನಡಿತಾ ಇದ್ದ ಗುಂಡಿನ ಕಾಳಗಕ್ಕೆ ತಿಲಾಂಜಲಿ ಹಾಕಿದ್ದಾರೆ. ಜೊತೆಗೆ ನಕ್ಸಲರಿಂದಾಗಿ ನಿದ್ದೆಗೆಟ್ಟಿದ್ದ ಕರ್ನಾಟಕ ತಮಿಳುನಾಡು ಹಾಗೂ ಕೇರಳ ಸರ್ಕಾರಕ್ಕೂ ನೆಮ್ಮದಿಯನ್ನು ನೀಡಿದ್ದಾರೆ. ಮುಖ್ಯವಾಹಿನಿಗೆ ಬಂದು ಮತ್ತೆ ಜನಪರ ಹೋರಾಟ ನಡೆಸುವ ಸಂಕಲ್ಪದೊಂದಿಗೆ ಎಲ್ಲರೂ ಶರಣಾಗಿದ್ದಾರೆ.

    Continue Reading

    DAKSHINA KANNADA

    ಉಡುಪಿ: ರಸ್ತೆ ಅಪಘಾತದಲ್ಲಿ 28 ವರ್ಷದ ಯುವಕ ಮೃ*ತ್ಯು

    Published

    on

    ಉಡುಪಿ: ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ದಾರುಣ ಘಟನೆ ಬೈರಂಪಳ್ಳಿ ಗ್ರಾಮದ ದೂಪದಕಟ್ಟೆ ಚೌಡೇಶ್ವರಿ ದೇವಸ್ಥಾನದ ಬಳಿ ಜ.6ರಂದು ಸಂಭವಿಸಿದೆ.

    ಮೃತರನ್ನು ಸಂತೋಷ್(28) ಎಂದು ಗುರುತಿಸಲಾಗಿದೆ.

    ಪೆರ್ಡೂರಿನಿಂದ ಹರಿಖಂಡಿಗೆ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಸಂತೋಷ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಸಂತೋಷ್ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ಹಿರಿಯಡ್ಕ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.

    ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending