ಉಡುಪಿ: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಣಿಪಾಲದ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಭಾಗವಾಗಿರುವ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗವು ಮಕ್ಕಳ ಅಸ್ಥಿಮಜ್ಜೆ ಕಸಿ ಸೌಲಭ್ಯದ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಶರತ್ ಕುಮಾರ್ ರಾವ್ ಹೇಳಿದರು.
ಮಕ್ಕಳಲ್ಲಿ ಅಸ್ಥಿಮಜ್ಜೆ ಕಸಿ ಚಿಕಿತ್ಸೆಯ ಕುರಿತಾದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ದೇಶದಲ್ಲಿರುವ 130 ಕೋಟಿ ಜನರಲ್ಲಿ ಪ್ರತಿವರ್ಷ 10 ಸಾವಿರ ಜನರಿಗೆ ಅಸ್ಥಿಮಜ್ಜೆ ಕಸಿ ಚಿಕಿತ್ಸೆಯ ಅಗತ್ಯವಿದೆ. ಇದಕ್ಕಾಗಿ ಇಂತಹ ಕೇಂದ್ರಗಳು ಅಗತ್ಯವಿದೆ” ಎಂದರು.
ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ಮಾತನಾಡಿ “ಅಸ್ಥಿಮಜ್ಜೆ ಕಸಿ ಚಿಕಿತ್ಸೆಯು ದುಬಾರಿ ಚಿಕಿತ್ಸೆಯಾಗಿದೆ. ಹೀಗಾಗಿ ನಮ್ಮಲ್ಲಿಗೆ ಬರುವ ಹಲವಾರು ಬಡ ರೋಗಿಗಳಿಗೆ ಈ ಚಿಕಿತ್ಸೆಯ ಅಗತ್ಯ ಬಿದ್ದ ಸಂಧರ್ಭದಲ್ಲಿ ದಾನಿಗಳ ಮತ್ತು ಇತರ ಮೂಲಗಳ ನೆರವಿನಿಂದ ಇಂತಹ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಭರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಆರ್ಥಿಕ ಸಂಕಷ್ಟದ ಕಾರಣಕ್ಕಾಗಿ ಯಾರೂ ಕೂಡಾ ಚಿಕಿತ್ಸೆಯಿಂದ ವಂಚಿತರಾಗಬಾರದು ಎಂಬುವುದು ಕಸ್ತೂರ್ನಾ ಆಸ್ಪತ್ರೆಯ ಆಶಯ” ಎಂದರು.
ಈ ಸಂಧರ್ಭದಲ್ಲಿ ಸಹ ಪ್ರಾದ್ಯಾಪಕ ಮತ್ತು ವಿಭಾಗದ ಮುಖ್ಯಸ್ತರಾದ ಡಾ.ವಾಸುದೇವ ಭಟ್ ಕೆ, ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಮಕ್ಕಳ ಅಸ್ಥಿಮಜ್ಜೆ ಕಸಿ ತಜ್ಞರಾದ ಡಾ.ವಿನಯ್ ಎಂ.ವಿ ಮತ್ತು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅರ್ಚನಾ ಎಂ.ವಿ ಅವರು ಮಕ್ಕಳಲ್ಲಿ ಅಸ್ಥಿಮಜ್ಜೆಯ ಕಸಿ ಪ್ರಕ್ರಿಯೆಯ ಕುರಿತು ಮಾಹಿತಿಯನ್ನು ನೀಡಿದರು.