ಮಂಗಳೂರು: ಆರ್ಥಿಕ ಮುಗ್ಗಟ್ಟಿನಿಂದ ಶಾಲೆಯನ್ನು ಮುಚ್ಚುತ್ತೇವೆ ಎಂಬ ಹೇಳಿಕೆಯಿಂದ ಗೊಂದಲಗೊಂಡು ವಿದ್ಯಾರ್ಥಿಗಳ ಪೋಷಕರು ಗಲಾಟೆ ನಡೆಸಿದ ಘಟನೆ ನಗರದ ಬೊಳೂರಿನಲ್ಲಿ ನಡೆದಿದೆ.
ನಗರದ ಬೊಳೂರಿನಲ್ಲಿ ಇನ್ಫೆಂಟ್ ಜೀಸಸ್ ಜೋಯ್ಲ್ಯಾಂಡ್ ಶಾಲೆಯನ್ನು ಮುಚ್ಚಲಾಗುತ್ತಿದೆ ಎಂದು ಶಾಲೆಯ ಮುಖ್ಯಸ್ಥೆ ಫ್ರಾನ್ಸಸ್ ಪಿಂಟೊ ಹೇಳಿಕೆ ನೀಡಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಆಗಮಿಸಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆಯನ್ನು ತರಾಟೆಗೆ ತೆಗೆದುಕೊಂಡರಲ್ಲದೇ, ಶಿಕ್ಷಣಾಧಿಕಾರಿಗಳನ್ನು ಕರೆಸಿ ಸಭೆಯನ್ನು ನಡೆಸಿದ ಘಟನೆ ಬೋಳಾರದಲ್ಲಿ ನಡೆಯಿತು.
ಕಳೆದ 31 ವರ್ಷಗಳಿಂದ ಈ ಶಾಲೆಯ ತರಗತಿ ನಡೆಯುತ್ತಿದೆ. ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಇಲ್ಲಿ ವಿದ್ಯಾರ್ಜನೆ ಮಾಡಲಾಗುತ್ತಿದೆ. ಸುಮಾರು 300 ಮಂದಿ ಮಕ್ಕಳೂ ಇಲ್ಲಿದ್ದಾರೆ. ಆದರೆ ನಿನ್ನೆ ಆರ್ಥಿಕ ಮುಗ್ಗಟ್ಟಿನಿಂದ ಶಾಲೆಯ ಕೆಲವು ಶಿಕ್ಷಕರು ಮುಖ್ಯ ಶಿಕ್ಷಕರ ಜೊತೆಗೆ ಸೇರಿ ಶಾಲೆಯನ್ನು ಮುಚ್ಚುವ ಹಂತಕ್ಕೆ ಬಂದಿದೆ ಎನ್ನುವ ತೀರ್ಮಾನಕ್ಕೆ ಬಂದು ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳಿಗೆ ಸೇರಿಸಿ, ಶಾಲೆಯನ್ನು ಮುಚ್ಚುತ್ತಿದ್ದೇವೆ ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಪೋಷಕರು ಇಂದು ಏಕಾಏಕಿ ಶಾಲೆಗೆ ಆಗಮಿಸಿ ಶಿಕ್ಷಕಿಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಳಿಕ ವಿವಾದ ಉದ್ವಿಗ್ನ ಸ್ಥಿತಿ ಪಡೆಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಶಿಕ್ಷಣ ಇಲಾಖಾಧಿಕಾರಿಗಳು, ಪೊಲೀಸರು ಆಗಮಿಸಿ ಮಾತುಕತೆ ನಡೆಸಿದ್ದಾರೆ.