ಮಂಗಳೂರು/ಬೆಂಗಳೂರು: ಭಾರತೀಯ ರೈಲ್ವೇ ಎಂದರೆ ಸಾಕು, ಮೊದಲು ನೆನಪಾಗುವುದೇ ಆರಾದಾಯಕ ಪ್ರಯಾಣ, ಕಡಿಮೆ ಖರ್ಚು, ಸುರಕ್ಷತೆ. ಇದೀಗ ರೈಲ್ವೇ ಇಲಾಖೆಯ ಮತ್ತೊಂದು ಕೆಲಸ ಭಾರೀ ಸದ್ದು ಮಾಡುತ್ತಿದೆ. ರೈಲು ತಪ್ಪುವ ಆತಂಕ ಎದುರಿಸಿದ ಮದುವೆ ದಿಬ್ಬಣ ತಂಡವೊಂದು, ಟ್ವಿಟರ್ ಮೂಲಕ ನೆರವು ಕೋರಿತ್ತು. ತಕ್ಷಣವೇ ಆ ಮದುವೆ ದಿಬ್ಬಣಕ್ಕೆ ನೆರವು ನೀಡಲಾಗಿದೆ.
ಏನಿದು ಘಟನೆ?
ಮುಂಬೈಯಿಂದ ಅಸ್ಸಾಂಗೆ ಹೊರಟ್ಟಿದ್ದ ಮದುವೆ ದಿಬ್ಬಣದ ತಂಡವೊಂದು ರೈಲು ತಡವಾದ ಹಿನ್ನಲೆಯಲ್ಲಿ ಮುಂದಿನ ರೈಲು ತಪ್ಪುವ ಆತಂಕ ಎದುರಾಗಿತ್ತು. ಶುಕ್ರವಾರ ವರನ ಕಡೆಯ 34 ಜನರ ದಿಬ್ಬಣದ ತಂಡ ಮುಂಬೈ-ಹೌರಾ ಗೀತಾಂಜಲಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿತ್ತು. ಈ ರೈಲು ಮಧ್ಯಾಹ್ನ 1.05ಕ್ಕೆ ಹೌರಾ ತಲುಪಬೇಕಿತ್ತು. ವಿಪರ್ಯಾಸವೆಂಬಂತೆ ಗೀತಾಂಜಲಿ ಎಕ್ಸ್ ಪ್ರೆಸ್ ರೈಲು ತಡವಾಗಿತ್ತು. ಹೀಗಾಗಿ ವರನ ಕಡೆಯವರಿಗೆ ಸಂಜೆಯ 4 ಗಂಟೆಯ ರೈಲು ಮಿಸ್ ಆಗುವ ಆತಂಕ ಎದುರಾಗಿತ್ತು.
ಮನುಷ್ಯನಿಗೆ ಅತೀ ದೊಡ್ಡ ಸಂಪತ್ತು ಎಂದರೆ ಬುದ್ದಿವಂತಿಕೆ ಎಂಬ ಮಾತಿನಂತೆ ಈ ದಿಬ್ಬಣದ ತಂಡದಲ್ಲಿದ್ದ ಚಂದ್ರಶೇಖರ್ ಎಂಬಾತ ಸಮಯಕ್ಕೆ ತಕ್ಕಂತೆ ಬುದ್ದಿವಂತಿಕೆ ಉಪಯೋಗಿಸಿ ಟ್ವಿಟರ್ ಮೂಲಕ ರೈಲ್ವೇ ಇಲಾಖೆಯ ನೆರವು ಕೋರಿದ್ದರು. ಇದ್ದಕ್ಕೆ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು, ದಿಬ್ಬಣದ ತಂಡಕ್ಕೆ ಅಗತ್ಯ ನೆರವು ನೀಡುವಂತೆ ಹೌರಾ ಡಿಆರ್ ಎಂಗೆ ಸೂಚಿಸಿದರು.ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಗೀತಾಂಜಲಿ ರೈಲಿನ ವೇಗದ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದೂ ಅಲ್ಲದೆ, ಹೌರಾ- ಗುವಾಹಟಿ ರೈಲನ್ನು ಕೆಲ ಕಾಲ ತಡೆಹಿಡಿದರು.
ಇದನ್ನೂ ಓದಿ : BBK11: ಬಿಗ್ ಬಾಸ್ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್ ಚುಪ್ ಆದ ಮಂಜು.!
ದಿಬ್ಬಣದ ತಂಡ ಗೀತಾಂಜಲಿ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಜೆ 4:08 ಕ್ಕೆ ಹೌರಾ ತಲುಪಿದರು. ಕೂಡಲೇ ಬ್ಯಾಟರಿ ಚಾಲಿತ ವಾಹನದಲ್ಲಿ 34 ಜನರು ಇರುವ ದಿಬ್ಬಣದ ತಂಡವನ್ನು ಫ್ಲ್ಯಾಟ್ ಫಾರಂ 24ರಿಂದ, ಫ್ಲ್ಯಾಟ್ ಫಾರಂ 9ಕ್ಕೆ ಕರೆದೊಯ್ಯಲಾಯಿತು. ನಂತರ ದಿಬ್ಬಣ ಹೊತ್ತ ರೈಲು ಗುವಾಹಟಿಯತ್ತ ಪ್ರಯಾಣ ಬೆಳೆಸಿತು. ವರನ ಕಡೆಯವರು ಸಮಯಕ್ಕೆ ಸರಿಯಾಗಿ ಮದುವೆ ಮಂಟಪ ತಲುಪ್ಪಿದ್ದು, ನಿಗದಿಯಂತೆ ಭಾನುವಾರ ಮದುವೆ ನಡೆದಿದೆ. ವರನ ತಂಡಕ್ಕೆ ಸರಿಯಾದ ಸಮಯಕ್ಕೆ ಸ್ಪಂದಿಸಿದ ರೈಲ್ವೇ ಸಿಬ್ಬಂದಿಗೆ ಹಾಗೂ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ತಿಳಿಸಿದೆ ಕುಟುಂಬ.