ಮಂಗಳೂರು: ಏಕಾಂಗಿಯಾಗಿ ರೈಲು ಪ್ರಯಾಣ ಮಾಡಿರುವ ಬಾಲಕನೋರ್ವನ ಮೊಬೈಲ್ ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಗಾಬರಿಗೊಂಡ ತಂದೆ ರೈಲ್ವೆ ಸಚಿವರಿಗೆ ಟ್ವೀಟ್ ಮಾಡಿದ ಅರ್ಧ ಗಂಟೆಯೊಳಗೆ ಸ್ಪಂದಿಸಿದ ರೈಲ್ವೆ ಸಚಿವಾಲಯವು ಪುತ್ರನಿಂದಲೇ ತಂದೆಗೆ ಕರೆ ಮಾಡಿಸಿದೆ.
ರೈಲ್ವೆ ಸಚಿವಾಲಯದ ತುರ್ತು ಸ್ಪಂದನೆಗೆ ಬಾಲಕನ ತಂದೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಕಿಶನ್ ರಾವ್ ಎಂಬುವವರ ಪುತ್ರ ಶಂತನು ಏ.19ರಂದು ಏಕಾಂಗಿಯಾಗಿ ಮಂಗಳೂರಿನಿಂದ ಕೊಟ್ಟಾಯಂಗೆ ರೈಲು ಪ್ರಯಾಣ ಮಾಡಿದ್ದಾನೆ. ಶಂತನು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ರಿಸಲ್ಟ್ ನಿರೀಕ್ಷೆಯಲ್ಲಿದ್ದನು.
ಪರೀಕ್ಷೆ ಬರೆದು ಮುಗಿಸಿರುವ ಹುಮ್ಮಸ್ಸಿನಲ್ಲಿದ್ದ ಬಾಲಕ ಕೇರಳದ ಕೊಟ್ಟಾಯಂನಲ್ಲಿರುವ ತನ್ನ ತಾತನ ಮನೆಗೆ ಹೋಗಲು ಬಯಸಿದ್ದನು. ಆದರೆ ಹೆತ್ತವರಿಗೆ ಜೊತೆಗೆ ಹೋಗಲು ಅನಾನುಕೂಲವಾದ್ದರಿಂದ ಬಾಲಕ ಏಕಾಂಗಿಯಾಗಿ ಪ್ರಯಾಣ ಬೆಳೆಸಿದ್ದಾನೆ.
ಈ ರೀತಿಯಲ್ಲಿ ಶಂತನು ಏಕಾಂಗಿಯಾಗಿ ಇದೇ ಮೊದಲ ಬಾರಿಗೆ ರೈಲು ಪ್ರಯಾಣ ಬೆಳೆಸಿದ್ದ. ಕಿಶನ್ ರಾವ್ ಅವರು ಏ.19ರಂದು ಬೆಳ್ಳಂಬೆಳಗ್ಗೆ 5ಗಂಟೆ ಸುಮಾರಿಗೆ ತಮ್ಮ ಪುತ್ರ ಶಂತನುವನ್ನು ಮಂಗಳೂರು ಸೆಂಟ್ರಲ್ ಸ್ಟೇಷನ್ನಲ್ಲಿ ಪರಶುರಾಮ ಎಕ್ಸ್‌ಪ್ರೆಸ್ ರೈಲು ಹತ್ತಿಸಿದ್ದಾರೆ. ಈ ರೈಲು ಮಧ್ಯಾಹ್ನ 2.30ರ ವೇಳೆಗೆ ಪಿರವಂ ರೈಲು ನಿಲ್ದಾಣವನ್ನು ತಲುಪಬೇಕಿತ್ತು.
ರೈಲು ಮಂಗಳೂರಿನಿಂದ ಹೊರಡುವ ವೇಳೆ ಧೈರ್ಯಕ್ಕೆ ಜೊತೆಗಿರಲಿ ಎಂದು ಮಗನಿಗೆ ತಂದೆ ಮೊಬೈಲ್ ಫೋನ್ ನೀಡಿದ್ದರು. ರೈಲು ಮಂಗಳೂರಿನಿಂದ ಹೊರಟಿತ್ತು. ಬೆಳಿಗ್ಗೆ 10 ಗಂಟೆಗೆ ಪುತ್ರನಿಗೆ ಕರೆ ಮಾಡುತ್ತಿದ್ದಾಗ ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಮತ್ತೆ ಮತ್ತೆ ಪ್ರಯತ್ನಿಸಿದರೂ ಫೋನ್ ಸ್ವಿಚ್ ಆಫ್ ಎಂದೇ ಬರುತ್ತಿತ್ತು.
ಇದರಿಂದ ಗಾಬರಿಗೊಳಗಾದ ತಂದೆ ಅನ್ಯ ಮಾರ್ಗವಿಲ್ಲದೇ ಆತನ ರೈಲ್ವೆ ಟಿಕೆಟ್ ನಂಬರ್ ಸಹಿತ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಷವ್ ಅವರಿಗೆ ಟ್ವೀಟ್ ಮಾಡಿದ್ದಾರೆ.
ತಕ್ಷಣ ಟ್ವೀಟ್ ಗಮನಿಸಿದ ರೈಲ್ವೆ ಸಚಿವಾಲಯ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದೆ. ಕೂಡಲೇ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸರು ಬಾಲಕ ಶಂತನು ಪ್ರಯಾಣಿಸುತ್ತಿದ್ದ ರೈಲಿಗೆ ಬಂದು ಪರಿಶೀಲನೆ ನಡೆಸಿದ್ದಾರೆ.
ಬಳಿಕ ಆತನ ಇರುವಿಕೆಯನ್ನು ಸ್ಪಷ್ಟಪಡಿಸಿದ ರೈಲ್ವೆ ಪೊಲೀಸರು ತಕ್ಷಣ ತಂದೆ ಕಿಶನ್ ರಾವ್ ಅವರಿಗೆ ಕರೆ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಬೆಳಗ್ಗೆ 11.08ರ ಸುಮಾರಿಗೆ ತಂದೆ ಕಿಶನ್ ರಾವ್ ಅವರಿಗೆ ಕರೆ ಮಾಡಿದ ಶಂತನು ‘ತಾನು ರೈಲಿನಲ್ಲಿ ನಿದ್ರೆಗೆ ಜಾರಿದ್ದೆ. ಅಚಾನಕ್ಕಾಗಿ ಫೋನ್ ಕೂಡಾ ಸ್ವಿಚ್ ಆಫ್ ಆಗಿತ್ತು.
ಯಾವುದೇ ತೊಂದರೆ ಇಲ್ಲದೇ ಆರಾಮಾಗಿದ್ದೇನೆ’ ಎಂದು ಹೇಳಿದ್ದಾನೆ. ತನ್ನ ಟ್ವೀಟ್‌ಗೆ ತುರ್ತಾಗಿ ಸ್ಪಂದಿಸಿ ರೈಲ್ವೆ ಸಚಿವಾಲಯ ಹಾಗೂ ರೈಲ್ವೆ ಪೊಲೀಸರ ಕಾರ್ಯಕ್ಕೆ ಕಿಶನ್ ರಾವ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.