ಬೆಂಗಳೂರು: ಚಡ್ಡಿ ಇದ್ದದರಿಂದ ಈ ದೇಶದಲ್ಲಿ ಒಳ್ಳೆಯ ವಾತಾವರಣ ಇದೆ. ಚಡ್ಡಿ ಇಲ್ಲದಿದ್ದರೆ ದೇಶದ ಪರಿಸ್ಥಿತಿ ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಆರ್‌ಎಸ್‌ಎಸ್ ಚಡ್ಡಿಗೆ ಬೆಂಕಿ ಹಚ್ತೇವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಚಡ್ಡಿ ಪ್ರವೃತ್ತಿ ಬಿಟ್ಟು ಪ್ಯಾಂಟ್‌ಗೆ ಬಂದಿದೆ. ಸಿದ್ದರಾಮಯ್ಯ ರಾಜಕೀಯಕ್ಕಾಗಿ ಮಾತನಾಡ್ತಾರೆ. ಆರ್‌ಎಸ್‌ಎಸ್ ಸಂಘಟನೆ ಇದ್ದದ್ದರಿಂದ ದೇಶ ಇವತ್ತು ಇಷ್ಟು ಹತೋಟಿಯಲ್ಲಿ ಇದೆ.
ಉಪ್ಪಿನಂಗಡಿ ಸೇರಿ ಹಲವೆಡೆ ಯಾವ ಪರಿಸ್ಥಿತಿ ಆಗುತ್ತಿದೆ ಎಂಬುವುದನ್ನು ನೀವು ನೋಡುತ್ತಿದ್ದೀರಿ. ಆರ್‌ಎಸ್‌ಎಸ್ ಸಿದ್ದರಾಮಯ್ಯರಿಗೆ ಏನು ಮಾಡಿದೆ ಗೊತ್ತಿಲ್ಲ.
ಅವರಿಗೆ ಸಮಸ್ಯೆ ಅಂದ್ರೆ ಆರ್‌ಎಸ್‌ಎಸ್ ದೇಶಭಕ್ತರನ್ನು ತಯಾರಿಸುತ್ತಿದೆ, ಒಳ್ಳೆಯ ಶಿಕ್ಷಣ, ರಾಷ್ಟ್ರೀಯತೆ ಕಲಿಸಿಕೊಡುತ್ತಿದೆ. ಇದರಿಂದ ಇವರ ಬೇಳೆ ಬೇಯಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ದೂರುತ್ತಿದ್ದಾರೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿ ಎಲ್ಲಾ ಮಸೀದಿಯೊಳಗೆ ಏನೇನು ಇದೆ ಎಂದು ಹುಡುಕಲು ಹೋಗ್ಬೇಡಿ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಸೌಹಾರ್ದತೆಯಿಂದ ಇರೋಣ ಎಂದು ಹೇಳಿದ್ದಾರೆ.
ಈಗ ಇದ್ದದ್ದನ್ನ ಸರಿಮಾಡಿಕೊಳ್ಳುವ ಅಂದಿದ್ದಾರೆ. ಆದ್ರೆ ಕೆಲವೊಮ್ಮೆ ಕುರುಹುಗಳು ಹುಟ್ಟಿದಾಗ ಭಾವನೆಗಳು ಇದ್ದೇ ಇರುತ್ತದೆ. ಜೊತೆಗೆ ಎಲ್ಲಿ ಸಾಕ್ಷ್ಯಗಳು ಸಿಗುತ್ತದೆ ಅಲ್ಲಿ ಹೋರಾಟ ಆಗಿಯೇ ಆಗುತ್ತದೆ.
ಹಿಜಾಬ್ ಬಗ್ಗೆ ಪ್ರತಿಕ್ರಿಯಿಸಿ ನಿಮ್ಗೆ ಹಿಜಾಬ್ ಬೇಕು ಎಂಬ ಮಡಿವಂತಿಕೆ ಇದ್ರೆ ಬೇರೆ ಕಾಲೇಜು ಮಾಡಿಕೊಳ್ಳಿ. ಅದರಲ್ಲೇನು ತಪ್ಪಿಲ್ಲ.
ಅಲ್ಲಿ ಹಿಜಾಬ್ ಅಲ್ಲ ಮುಖ ಮುಚ್ಚಿಕೊಂಡು ಹೋಗಲಿ. ಆದ್ರೆ ಅದು ಒಳ್ಳೆಯ ಬೆಳವಣಿಗೆಯಲ್ಲ. ಸಾಮಾಜಿಕವಾಗಿ ಕಲ್ಮಶ ಮಾಡುವುದಕ್ಕಿಂತ ಬೇರೆ ಇರುವುದು ಉತ್ತಮ ಎಂದರು.