ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ನಾಯಕತ್ವ ವಹಿಸಿದೆ. ಕಾಲು ಕೆರೆದುಕೊಂಡು ನಾವು ಯಾರ ಜೊತೆಯೂ ತಗಾದೆ ಶುರು ಮಾಡುವುದಿಲ್ಲ. ಆದರೆ ಭಾರತದ ತಂಟೆಗೆ ಬಂದರೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ರವಾನಿಸಿದ್ದಾರೆ.
ಉಡುಪಿ : ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ನಾಯಕತ್ವ ವಹಿಸಿದೆ. ಕಾಲು ಕೆರೆದುಕೊಂಡು ನಾವು ಯಾರ ಜೊತೆಯೂ ತಗಾದೆ ಶುರು ಮಾಡುವುದಿಲ್ಲ. ಆದರೆ ಭಾರತದ ತಂಟೆಗೆ ಬಂದರೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ರವಾನಿಸಿದ್ದಾರೆ.
ಶುಕ್ರವಾರ ಮಾಹೆ ವಿಶ್ವವಿದ್ಯಾನಿಲಯದ 30ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದು ಇಡೀ ಪ್ರಪಂಚ ಭಾರತದ ಮಾತು ಕೇಳುವ ಕಾಲ ಬಂದಿದೆ. ಐದು ವರ್ಷದಲ್ಲಿ ವಿಶ್ವದ ಮೂರನೇ ಆರ್ಥಿಕ ದೇಶವಾಗಿ ಭಾರತ ಸದೃಢವಾಗಿ ನಿಲ್ಲಲಿದೆ.
ಭಾರತ 2047ಕ್ಕೆ ಪ್ರಪಂಚ ಮೊದಲ ಸ್ಥಾನದಲ್ಲಿ ನಿಲ್ಲಲಿದೆ. ದೇಶವನ್ನು ಐದು ಟ್ರಿಲಿಯನ್ ಆರ್ಥಿಕ ರಾಷ್ಟ್ರ ಮಾಡುವುದು ಪ್ರಧಾನಿ ಮೋದಿ ಕನಸು ಆಗಿದೆ ಎಂದವರು ನುಡಿದರು.
ದೇಶದ ಯುವ ಜನಾಂಗ ಇದಕ್ಕೆ ಕೊಡುಗೆ ನೀಡುತ್ತಿದೆ. ಗ್ಲೋಬಲ್ ಸಿಟಿಜನ್ ನಿರ್ಮಿಸಲು ಎನ್ ಇ ಪಿ ಜಾರಿಗೆ ತಂದಿದ್ದೇವೆ.
ಮಾಹೆ ವಿವಿಯ ಸತ್ಯ ನಾಡೆಳ್ಳಾ ಮೈಕೋಸಾಫ್ಟ್ ನ ನೇತೃತ್ವ ವಹಿಸಿದ್ದಾರೆ.
ಮೈಕ್ರೋಸಾಫ್ಟ್ ಮೀರಿಸುವಂತಹ ಕಂಪನಿ ಭಾರತದಲ್ಲಿ ಸ್ಥಾಪನೆ ಆಗಬೇಕು.
ಅಂತಾರಾಷ್ಟ್ರೀಯ ಕಂಪನಿ ಸಿಇಒಗಳು ಭಾರತ ಮೂಲದವರು ಎಂಬೂದು ನಮ್ಮ ಹೆಗ್ಗಳಿಕೆಯಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಜ್ಞಾನದ ಜೊತೆ ಬುದ್ದಿವಂತಿಕೆಯೂ ಅಗತ್ಯ ಎಂದ ಅವರು ರಾಮನಿಗಿಂತ ರಾವಣ ಜ್ಞಾನಿಯಾಗಿದ್ದ. ವಿವೇಕ ಇರುವುದರಿಂದ ಜನ ರಾಮನನ್ನು ಪೂಜಿಸುತ್ತಾರೆ.
ಸಂಸ್ಕೃತಿ ಮತ್ತು ಸಂಪ್ರದಾಯ ಇಲ್ಲದ ನಾಗರಿಕ ಜೀವನಕ್ಕೆ ಅರ್ಥ ಇಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ಹಲವಾರು ವರ್ಷಗಳಿಂದ ಸಾಧನೆ ಮಾಡಿಕೊಂಡಿದ್ದೇನೆ.
ಈ ಬಗೆಗಿನ ನಮ್ಮ ಅಭಿಮಾನವನ್ನು ಕೆಲವರು ಹೆಚ್ಚುಗಾರಿಕೆ ಎಂದು ಟೀಕಿಸುತ್ತಾರೆ ಎಂದು ನುಡಿದರು.
ಪುರಾಣ ಕಾಲದಿಂದಲೂ ಭಾರತ ಹೇಗೆ ಜ್ಞಾನದ ರಾಜಧಾನಿಯಾಗಿತ್ತೆಂಬುದನ್ನು ವಿವಿಧ ಉದಾಹರಣೆಗಳೊಂದಿಗೆ ವಿವರಿಸಿದ ಅವರು, ಶೂನ್ಯ ಎಂಬುದು ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ.
ಅದೇ ರೀತಿ ಪಶ್ಚಿಮದ ದೇಶಗಳು ಭೂಮಿ ಗುಂಡಗಿದೆ ಎಂಬುದನ್ನು ತಿಳಿಯುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಭಾರತದಲ್ಲಿ ಋಷಿಗಳು ಅದನ್ನು ಜಗತ್ತಿಗೆ ಸಾರಿದ್ದರು.
ಪೈಥಾಗೋರಸ್ ಸಿದ್ಧಾಂತ ಬರುವುದಕ್ಕೆ 300 ವರ್ಷ ಪೂರ್ವದಲ್ಲಿ ಅದು ಭಾರತದಲ್ಲಿ ಪ್ರಚಲಿತವಿತ್ತು ಎಂದು ಅವರು ವಿವರಿಸಿದರು.
ಭಾರತ ಮತ್ತೆ ಜ್ಞಾನದ ಕೇಂದ್ರವಾಗಬೇಕೆಂಬುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಂಡಿದೆ. ದೇಶದ ಪ್ರಗತಿಗೆ ‘ಹೊಸ ಭಾರತ’ ಮುನ್ನುಡಿ ಬರೆಯಲಿದೆ ಎಂದು ರಕ್ಷಣಾ ಸಚಿವರು ನುಡಿದರು.
ನಾಸಿಕ್‌ನ ಎಂಯುಎಚ್‌ಎಸ್ ವಿವಿಯ ಕುಲಪತಿ ಲೆ.ಜ.(ಡಾ.) ಮಾಧುರಿ ಕಾಣಿಟ್ಕರ್ ಅವರು ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಾಹೆ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಘಟಿಕೋತ್ಸವದ ಪ್ರಾರಂಭವನ್ನು ಘೋಷಿಸಿದರು.
ಮಾಹೆ ಟ್ರಸ್ಟ್‌ನ ಅಧ್ಯಕ್ಷ ಡಾ.ರಂಜನ್ ಪೈ ಉಪಸ್ಥಿತರಿದ್ದರು. ಮಾಹೆಯ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಮಾಹೆಯ ಸಂಕ್ಷಿಪ್ತ ಪಕ್ಷಿನೋಟ ನೀಡಿದರು.
ಮಂಗಳೂರಿನ ಪ್ರೊ. ವೈಸ್‌ಚಾನ್ಸಲರ್ ಡಾ.ದಿಲೀಪ್ ಜಿ.ನಾಯಕ್ ಅತಿಥಿ ಗಳನ್ನು ಸ್ವಾಗತಿಸಿದರೆ, ಮಣಿಪಾಲ ಕೆಎಂಸಿಯ ಡೀನ್ ಡಾ.ಶರತ್ ಕುಮಾರ್ ಹಾಗೂ ಬೆಂಗಳೂರಿನ ಡಾ.ಪ್ರಜ್ಞಾ ರಾವ್ ಅತಿಥಿಗಳನ್ನು ಪರಿಚಯಿಸಿದರು. ರಿಜಿಸ್ಟ್ರಾರ್ ಡಾ.ನಾರಾಯಣ್ ಸಭಾಹಿತ್ ವಂದಿಸಿ, ಡಾ.ಅನಿಲ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೆ ಮೊದಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆ್ಯಂಡ್ ಫ್ಲಾನಿಂಗ್‌ನ ಆಕರ್ಷಕ ಹೊಸ ಕಟ್ಟಡವನ್ನು ಉದ್ಘಾಟಿಸಿದರು.