ಇಸ್ಲಾಮಾಬಾದ್: ಇಮ್ರಾನ್ ಖಾನ್ಗೆ ಭಾರತ ಅಷ್ಟೊಂದು ಇಷ್ಟವಾಗಿದ್ದರೆ ಅವರು ಭಾರತಕ್ಕೇ ಹೋಗಿ ನೆಲೆಸಲಿ ಎಂದು ಪಾಕಿಸ್ತಾನದ ವಿರೋಧ ಪಕ್ಷದ ನಾಯಕಿ ಮರ್ಯಮ್ ನವಾಜ್ ಷರೀಫ್ ಹೇಳಿದ್ದಾರೆ.
ಪದೇಪದೆ ಭಾರತವನ್ನು ಹೊಗಳುತ್ತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಭಾರತ ಗೌರವದ ಪ್ರಜ್ಞೆ ಹೊಂದಿರುವ ರಾಷ್ಟ್ರ. ಯಾವುದೇ ಸೂಪರ್ ಪವರ್ ಕೂಡ ಭಾರತದ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ. ಜಗತ್ತಿನ ಯಾವುದೇ ಪ್ರಬಲ ರಾಷ್ಟ್ರ ಭಾರತಕ್ಕೆ ಷರತ್ತುಗಳನ್ನು ವಿಧಿಸಲು, ಅದಕ್ಕೆ ನಿರ್ದೇಶನ ನೀಡಲು ಆಗುವುದಿಲ್ಲ.
ಭಾರತವು ಸೂಪರ್ ಪವರ್ ರಾಷ್ಟ್ರವಾಗಿದ್ದು, ಆ ರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸಲು ಯಾವ ದೇಶದಿಂದಲೂ ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರೋಧ ಪಕ್ಷದ ನಾಯಕಿ ಮರ್ಯಮ್ ನವಾಜ್ ಷರೀಫ್ ಕಿಡಿಕಾರಿದ್ದಾರೆ. ಇಮ್ರಾನ್ ಖಾನ್ ಪಾಕಿಸ್ತಾನದ ಇತಿಹಾಸದಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿರುವ ಮೊದಲ ಪ್ರಧಾನಿಯಾಗಲಿದ್ದಾರೆ.