ಚಂಡೀಗಢ್: ಅಕ್ರಮ ಗಣಿಗಾರಿಕೆ ಮಾಫಿಯಾವನ್ನು ತಡೆಯಲು ಹೋದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಆರೋಪಿಗಳು ಲಾರಿ ಹರಿಸಿ ಕೊಲೆ ಮಾಡಿರುವ ದುರಂತ ಘಟನೆ ಚಂಡೀಗಢದ ಹರ್ಯಾಣದ ನುಹ್ನಲ್ಲಿ ನಡೆದಿದೆ.
ಸುರೇಂದ್ರ ಸಿಂಗ್ ಬಿಷ್ಣೋಯ್ ಮೃತ ಪೊಲೀಸ್ ಅಧಿಕಾರಿ.
ಅವರು ಅರಾವಳಿ ಪರ್ವತ ಶ್ರೇಣಿಯ ಸಮೀಪದ ಪಚಗಾಂವ್ನಲ್ಲಿ ಅಕ್ರಮವಾಗಿ ಕಲ್ಲುಗಳನ್ನು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ಸ್ಥಳಕ್ಕೆ ಭೇಟಿ ನೀಡಿದ್ದರು.
ಪೊಲೀಸ್ ಸಿಬ್ಬಂದಿಯನ್ನು ಕಂಡು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಲು ಆರಂಭಿಸಿದರು. ಹಿರಿಯ ಅಧಿಕಾರಿ ಆರೋಪಿಗಳ ದಾರಿಯಲ್ಲಿ ಅಡ್ಡ ನಿಂತು ಕಲ್ಲು ತುಂಬಿದ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.
ಆದರೆ ಲಾರಿ ಚಾಲಕ ಅಧಿಕಾರಿ ಮೇಲೆಯೇ ಲಾರಿ ಹರಿಸಿದ್ದಾನೆ. ಇದರಿಂದ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ.
ನಂತರ ಆರೋಪಿಗಳು ಪ್ರದೇಶದಿಂದ ಪರಾರಿಯಾಗಿದ್ದಾರೆ. ಇದೀಗ ಅವರನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಭೀಕರ ಘಟನೆ ಬಗ್ಗೆ ಮಾಹಿತಿ ಪಡೆದ ನುಹ್ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಸಿಂಗ್ಲಾ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದಾರೆ.