ಮಂಗಳೂರು: ರಾಜ್ಯದಲ್ಲಿ ಅತಿವೃಷ್ಠಿ ಹಾಗೂ ನೆರೆ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಆದರೆ 25 ಸಂಸದರು ಮತ್ತು ರಾಜ್ಯ ಸರ್ಕಾರ ಗೃಹ ಸಚಿವರ ಬಳಿ ಎನ್‌ಡಿಆರ್‌ಎಫ್ ಅನುದಾನ ಯಾಕೆ ಕೇಳುತ್ತಿಲ್ಲ ಎಂದು ವಿರೋಧಪಕ್ಷ ಉಪನಾಯಕ ಯು.ಟಿ ಖಾದರ್ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಈಗ ಯಾವುದೇ ಅತಿವೃಷ್ಟಿಯ ಯೋಜನೆಗಳಿಲ್ಲ. ಜೊತೆಗೆ ಇವರಿಗೆ ಕೇಂದ್ರದಿಂದ ಅನುದಾನ ಕೇಳುವ ಧೈರ್ಯವೂ ಇಲ್ಲ. ಇದರಿಂದ ನೊಂದವರು ಅನಾಥರಾಗಿದ್ದಾರೆ.
ಮೊನ್ನೆ ಗೃಹಸಚಿವರು ಬೆಂಗಳೂರಿಗೆ ಬಂದಾಗ ಅವರ ಬಳಿ ಪಕ್ಷದ ಬಗ್ಗೆ ಮಾತನಾಡುತ್ತಾರೆ ಹೊರತು ಎನ್‌ಡಿಆರ್‌ಎಫ್ ಅನುದಾನ ಕೇಳಲು ಇವರಿಗೆ ಬಾಯಿ ಬರುವುದಿಲ್ಲ. ಇವರು ಜನರನ್ನು ಉಳಿಸುವ ಬದಲು ಪಕ್ಷ ಉಳಿಸುವ ಬಗ್ಗೆ ಗೃಹಸಚಿವರ ಹತ್ತಿರ ಮಾತನಾಡುತ್ತಾರೆ.
ಇವರಿಗೆ ಕೇಂದ್ರದ ಬಳಿ ಕೇಳಲು ಮುಜುಗರ ಮತ್ತು ಭಯ ಆಗೋದಾದರೆ ಸರ್ವಪಕ್ಷದ ಸಭೆ ಕರೆದುಕೊಂಡು ಹೋಗಲಿ. ರಾಜ್ಯದ ಪರವಾಗಿ ನಾವು ಮಾತನಾಡುತ್ತೇವೆ. ಸುಳ್ಯ-ಸಂಪಾಜೆಗೆ ವಿಶೇಷ ತಂಡ ಕಳುಹಿಸಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಶಾಂತಿ- ಸಾಮರಸ್ಯಕ್ಕೆ ಜಿಲ್ಲಾಡಳಿತದ ಯಾವುದೇ ತೀರ್ಮಾನಕ್ಕೆ ನಾವು ಬದ್ಧ. ಆದರೆ ಈಗ 3 ಪರ್ಸೆಂಟ್ ಸಮಾಜಘಾತುಕರಿಗೆ ಹೆದರಿ 97 ಶೇಕಡಾ ಜನರಿಗೆ ಕಷ್ಟ ಕೊಡುತ್ತಿದ್ದಾರೆ.
ಸಂಜೆ ವೇಳೆ ಡಾಕ್ಟರ್‌ಗಳಿಗೆ, ಫ್ಯಾಮಿಗೆ ಏಕವಚನದಲ್ಲಿ ಬೈಯ್ಯುವುದು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.