ಕಲಬುರಗಿ: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನವನ್ನು ನಿರ್ವಹಿಸುವುದಕ್ಕೆ ಹಲವಾರು ಮಂದಿಗೆ ಅರ್ಹತೆ ಇರಬಹುದು. ಆದರೆ ನಮ್ಮ ಪಕ್ಷ ಒಂದು ವೇಳೆ ಆ ಜವಾಬ್ದಾರಿ ನನಗೆ ನೀಡಿದರೆ ಸಮರ್ಥವಾಗಿ ನಿಭಾಯಿಸಲು ಸಿದ್ಧ ಎಂದು ಇಂಧನ ಖಾತೆಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವನ್ನು ಮುನ್ನಡೆಸುವ ಯೋಗ್ಯತೆ ಇವತ್ತಿನ ಯುವ ಸಮುದಾಯಕ್ಕಿದೆ. ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದೂ ನನಗೆ ಗೊತ್ತಿರಲಿಲ್ಲ.
ನಮ್ಮ ಹಿರಿಯರು ನನಗೆ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಪ್ರಮುಖವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತತ್ಕ್ಷಣ ಬದಲಾವಣೆ ಆಗುತ್ತದೆ ಎನ್ನುವುದು ನನಗೇನು ಅನಿಸುತ್ತಿಲ್ಲ. ಮುಂಬರುವ ಚುನಾವಣೆಯಲ್ಲಿ 130 ರಿಂದ 150 ಸ್ಥಾನ ಗೆಲ್ಲುವುದು ಪಕ್ಷದ ಗುರಿಯಾಗಿದೆ.
ಗೆಲ್ಲಲು ಬೇಕಾದಂತಹ ಕಾರ್ಯತಂತ್ರ ರೂಪಿಸುತ್ತಿದ್ದೇವೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ ಬಗ್ಗೆ ಉಲ್ಲೇಖಿಸಿದ ಅವರು ಸ್ವಾತಂತ್ರ ಪೂರ್ವದ ಕಾಂಗ್ರೆಸ್ ಬೇರೆ, ಸ್ವಾತಂತ್ರ ನಂತರದ ಕಾಂಗ್ರೆಸ್ ಬೇರೆ. ಮಾಜಿ ಸಿಎಂ ಸಿದ್ದರಾಮಯ್ಯ ಆರಂಭದ ದಿನಗಳಲ್ಲಿ ಸಮಾಜವಾದಿಯಾಗಿದ್ದರು.
ಬಳಿಕ ಜೆಡಿಎಸ್‌ಗೆ ಹಾಗೂ ಆನಂತರ ಅಧಿಕಾರಕ್ಕಾಗಿ ಕಾಂಗ್ರೆಸ್‌ಗೆ ಹೋದರು. ಈಗಲೂ ಅವರು ಸಿಎಂ ಅಭ್ಯರ್ಥಿ ಅಲ್ಲ ಎಂದರೆ ಯಾವ ಪಾರ್ಟಿಗೆ ಹೋಗ್ತಾರೆ ಎನ್ನುವುದು ಪ್ರಶ್ನಾರ್ಥಕ ಚಿಹ್ನೆ ಇದೆ.
ವಿವಾದಗಳನ್ನು ಎಳೆದು ಜನರನ್ನು ದಿಕ್ಕು ತಪ್ಪಿಸಬೇಕೆನ್ನುವುದೇ ಅವರ ಆಶಯವಾಗಿದೆ. ಅಭಿವೃದ್ಧಿ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎನ್ನುವ ಸವಾಲು ಸ್ವೀಕರಿಸಲು ಸಿದ್ಧ.
ಬಜೆಟ್, ಅಭಿವೃದ್ಧಿ ಬಗ್ಗೆ ಒಂದೇ ಒಂದು ದಿನವೂ ಚರ್ಚೆ ಮಾಡದವರಿಗೆ ಈಗ ಮಾತನಾಡಲು ಯೋಗ್ಯತೆ ಇಲ್ಲ ಎಂದರು.ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುವುದು ತಪ್ಪು ಎಂದು ನಾವೆಲ್ಲೂ ಹೇಳುತ್ತಿಲ್ಲ.
ಆದರೆ ದೇವಸ್ಥಾನಗಳಿಗೆ ಹೇಗೆ ಹೋಗಬೇಕು ಎನ್ನುವುದು ಕೆಲವರ ಭಾವನೆಗೆ ಸಂಬಂಧಪಟ್ಟದ್ದು. ಪ್ರಮುಖವಾಗಿ ಅವರವರ ಭಾವನೆಗೆ ತಕ್ಕಂತೆ ಅವರವರು ನಡೆದುಕೊಳ್ಳುತ್ತಾರೆ.
ಸಿದ್ದರಾಮಯ್ಯ ಅವರಿಗೆ ಯಾವ ಭಾವನೆ ಇದೆ ನನಗೆ ಗೊತ್ತಿಲ್ಲ. ಅವರು ಒಳಗೊಂದು, ಹೊರಗೊಂದು ಮಾತನಾಡುತ್ತಾರೆ ಎಂದು ಸುನಿಲ್ ಕುಮಾರ್ ತಿಳಿಸಿದರು.