ಮಂಗಳೂರು: ದ.ಕ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸರಣಿ ಹತ್ಯೆಯ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಸಿಕೊಳ್ಳುವುದಾಗಿ ನೀಡಿದ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ.
ಆದರೆ ಕೋಮು ದ್ವೇಷಕ್ಕೆ ಕೊಲೆಯಾದ ಫಾಸಿಲ್, ಮಸೂದ್ ಇನ್ನಿತರ ಕೊಲೆ ಪ್ರಕರಣದ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ವಿಚಾರದಲ್ಲಿ ಮೌನ ಏಕೆ? ಎಂದು ಶಾಸಕ, ವಿಪಕ್ಷ ಉಪನಾಯಕ ಯು.ಟಿ ಖಾದರ್ ಅವರು ಪ್ರಶ್ನಿಸಿದ್ದಾರೆ.
ಹಂತಕ ಆರೋಪಿಗಳ ಆಸ್ತಿ ಮುಟ್ಟುಗೋಲು ವಿಚಾರವಾಗಿ ಹೆಚ್ಚುವರಿ ಪೊಲೀಸ್ ನಿರ್ದೇಶಕ (ಎಡಿಜಿಪಿ) ಯವರಿಗೆ ಬರೆದ ಮನವಿ ಪತ್ರದಲ್ಲಿ ಉಲ್ಲೇಖಿಸಿ ‘ದ.ಕ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸರಣಿ ಕೊಲೆಗಳ ಆರೋಪಿಗಳನ್ನು ಬಂಧಿಸಲು, ಅವರನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಮತ್ತು ಕೊಲೆಗಳ ಸರಣಿ ಮುಂದುವರೆಯದಂತೆ ತಡೆಯಲು ಪೊಲೀಸ್ ಇಲಾಖೆ ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ.
ಪ್ರವೀಣ್ ನೆಟ್ಟಾರು ಕೊಲೆಯ ಆರೋಪಿಗಳ ಆಸ್ತಿ ಮುಟ್ಟುಗೋಲು ವಿಚಾರವನ್ನು ನಾನು ಸ್ವಾಗತಿಸುತ್ತೇನೆ. ಕೊಲೆ ಹಾಗೂ ಸಮಾಜದಲ್ಲಿ ಭಯವನ್ನು ಹುಟ್ಟಿಸುವ ಸಮಾಜಘಾತುಕ ದುಷ್ಕರ್ಮಿಗಳ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ಎಲ್ಲರ ಬೆಂಬಲವೂ ಇದೆ.
ಆದರೆ ಫಾಸಿಲ್, ಮಸೂದ್ ಕೊಲೆ ಆರೋಪಿಗಳ ಆಸ್ತಿ ಮುಟ್ಟುಗೋಲು ವಿಚಾರದಲ್ಲಿ ಮೌನ ಏಕೆ? ಎಂದು ಪ್ರಶ್ನಿಸಿ ನಾಗರಿಕ ಸಮಾಜದ ಅನುಮಾನ ಮತ್ತು ಪ್ರಶ್ನೆಗಳನ್ನು ತೆರೆದಿಟ್ಟಿದ್ದಾರೆ.
ಅನುಮಾನಗಳನ್ನು ಬಗೆಹರಿಸಿ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಬರುವಂತಹ ಸೂಕ್ತ ಉತ್ತರವನ್ನು ನಿಮ್ಮಿಂದ ನಿರೀಕ್ಷಿಸಿದ್ದೇನೆ. ಉತ್ತರ ನೀಡುತ್ತೀರಿ ಎನ್ನುವ ವಿಶ್ವಾಸ ನನಗಿದೆ’ ಎಂದು ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿಗಳಿಗೆ ಬರೆದಿರುವ ಪತ್ರದಲ್ಲಿ ಖಾದರ್ ಉಲ್ಲೇಖಿಸಿದ್ದಾರೆ.