ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಕ್ಷಮೆ ಯಾಚಿಸಬೇಕು.
ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಕ್ಷಮೆ ಯಾಚಿಸಬೇಕು.
ಇಲ್ಲದಿದ್ದರೆ ಅವರ ವಿರುದ್ಧ ಮಾನ ನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತಾನಾಡಿದ ಹರೀಶ್ ಕುಮಾರ್ ಅವರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮೇ 22 ರಂದು ವಿಜಯೋತ್ಸವ ಮತ್ತು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ.
ಈ ಹೇಳಿಕೆ ಬಗ್ಗೆ ಕಾಂಗ್ರೆಸ್ ಪಕ್ಷ ಕಾನೂನಾತ್ಮಕವಾಗಿ ಚರ್ಚಿಸಿದೆ. ಪ್ರಥಮವಾಗಿ ಠಾಣೆಗಳಲ್ಲಿ ಪ್ರಕರಣ ದಾಖಲಿಸುವ ಕೆಲಸ ನಡೆಯುತ್ತದೆ.
ಹರೀಶ್ ಪೂಂಜಾ ಕ್ಷಮೆ ಯಾಚಿಸದಿದ್ದರೆ, ಮುಂದಿನ ದಿನಗಳಲ್ಲಿ ಅವರ ವಿರುದ್ಧ ಮಾನ ನಷ್ಠ ಮೊಕದ್ದಮೆ ದಾಖಲಿಸಲಾಗುವುದು ಎಂದರು.
ಬೆಳ್ತಂಗಡಿ ತಾಲೂಕಿನಲ್ಲಿ ವಿಧಾನ ಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದ್ದು, ಇದಕ್ಕೆ ಮಂಜೂರಾತಿ ಕೊಡಲಾಗಿದೆಯೇ? ಸರಕಾರದ ಅನುಮೋದನೆ ಲಭಿಸಿದೆಯೇ? ವರ್ಕ್ ಆರ್ಡರ್ ಆಗಿದೆಯೇ ಎಂಬುದನ್ನು ಶಾಸಕ ಪೂಂಜಾ ಸ್ಪಷ್ಟ ಪಡಿಸ ಬೇಕು.
ಏಕೆಂದರೆ ತಾಲೂಕಿನ ಆರಂಬೋಡಿ ಗ್ರಾಮದಲ್ಲಿ 3 ಮಾರ್ಗಗಳಿಗೆ ಹಾಕಿದ್ದ ಜಲ್ಲಿ ಮತ್ತು ಮರಳನ್ನು ನಿನ್ನೆ ಗುತ್ತಿಗೆದಾರರು ಜೆಸಿಬಿ ಮೂಲಕ ತೆರವು ಮಾಡಿ ವಾಪಸ್ ಕೊಂಡು ಹೋಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಟ್ಕಾ, ಜುಗಾರಿ ದಂಧೆ, ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕು.
ಇಲ್ಲದೇ ಇದ್ದಲ್ಲಿ ಕಡಿವಾಣ ಹಾಕುವುದು ಹೇಗೆನ್ನುವುದು ಗೊತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮುಖಂಡರಾದ ಮನುರಾಜ್, ಶಾಲೆಟ್ ಪಿಂಟೊ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಇದ್ದರು.