ತಾಯಿಯನ್ನು ಕಳೆದುಕೊಂಡಿರುವ ನೋವಿನಲ್ಲಿರುವ ನಟ ಸುದೀಪ್ ತಾಯಿಯ ಕುರಿತು ಸುದೀರ್ಘವಾದ ಭಾವುಕ ಟ್ವೀಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ನನ್ನ ತಾಯಿ, ಯಾವುದೇ ಪಕ್ಷಪಾತವಿಲ್ಲದ, ಅತ್ಯಂತ ಪ್ರೀತಿಯ, ಕ್ಷಮಿಸುವ, ಕಾಳಜಿ ವಹಿಸುವ ಮತ್ತು ಪ್ರೀತಿಯನ್ನು ಕೊಡುವ ನನ್ನ ಬದುಕಿನಲ್ಲಿ ಮೌಲ್ಯಯುತವಾದನ್ನು ತೋರಿಸಿದವಳು ಮತ್ತು ಯಾವಾಗಲೂ ಅದನ್ನು ಪಾಲಿಸುವ ಮೌಲ್ಯವನ್ನು ಹೇಳಿಕೊಟ್ಟ ಜೀವವದು. ಬದುಕಿನಲ್ಲಿ ನನ್ನ ಪಕ್ಕದಲ್ಲಿಯೇ ಇದ್ದ ಮಾನವ ರೂಪದ ನಿಜವಾದ ದೇವರಾಗಿದ್ದರು ನನ್ನಮ್ಮ ಎಂದು ಬರೆದುಕೊಂಡಿದ್ದಾರೆ.
ನಟ ಸುದೀಪ್ ತಾಯಿ ಸರೋಜ ಅವರು ಅ.20ರಂದು ಬೆಳಗ್ಗೆ ಇಹಲೋಕ ತ್ಯಜಿಸಿದರು. ನ್ಯುಮೋನಿಯದಿಂದ ಬಳಲುತ್ತಿದ್ದ ಸುದೀಪ್ ತಾಯಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಅ.20ರಂದು ಸಂಜೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಪೋಸ್ಟ್‌ನಲ್ಲಿ ಏನಿದೆ?
ನನ್ನ ತಾಯಿ, ಯಾವುದೇ ಪಕ್ಷಪಾತವಿಲ್ಲದ, ಅತ್ಯಂತ ಪ್ರೀತಿಯ, ಕ್ಷಮಿಸುವ, ಕಾಳಜಿ ವಹಿಸುವ ಮತ್ತು ಪ್ರೀತಿಯನ್ನು ಕೊಡುವ ನನ್ನ ಬದುಕಿನಲ್ಲಿ ಮೌಲ್ಯಯುತವಾದನ್ನು ತೋರಿಸಿದವಳು ಮತ್ತು ಯಾವಾಗಲೂ ಅದನ್ನು ಪಾಲಿಸುವ ಮೌಲ್ಯವನ್ನು ಹೇಳಿಕೊಟ್ಟ ಜೀವವದು. ಬದುಕಿನಲ್ಲಿ ನನ್ನ ಪಕ್ಕದಲ್ಲಿಯೇ ಇದ್ದ ಮಾನವ ರೂಪದ ನಿಜವಾದ ದೇವರಾಗಿದ್ದರು ನನ್ನಮ್ಮ.
ನನಗೆ ಹಬ್ಬ ಎಂದರೆ ಅದು ನನ್ನ ತಾಯಿ. ನನ್ನ ಮೊದಲ ಅಭಿಮಾನಿ, ಹಿತೈಷಿ ಎಲ್ಲವೂ ಅವರಾಗಿದ್ದರು. ಕೆಟ್ಟ ಕೆಲಸವನ್ನೂ ಇಷ್ಟಪಟ್ಟವರು, ಒಳ್ಳೆಯ ಕೆಲಸ ಮಾಡಿದಾಗಲಂತೂ ಬೆನ್ನು ತಟ್ಟಿ ಸಂಭ್ರಮಿಸಿದವರು. ಈಗ ಆ ಎಲ್ಲ ಸುಂದರ ಘಳಿಗೆಗಳು ನೆನಪು ಮಾತ್ರ. ನಾನೀಗ ಅನುಭವಿಸುತ್ತಿರುವ ಸಂಕಟವನ್ನು ಹಂಚಿಕೊಳ್ಳಲು ನನ್ನಲ್ಲಿ ಪದಗಳಿಲ್ಲ. ಅವರಿಲ್ಲದ ಶೂನ್ಯವನ್ನು ಒಪ್ಪಿಕೊಳ್ಳಲು ನನ್ನಿಂದ ಆಗುತ್ತಿಲ್ಲ. ಕೇವಲ 24 ಗಂಟೆಗಳಲ್ಲಿ ಎಲ್ಲವೂ ಬದಲಾಗಿ ಹೋಯಿತು.
ಪ್ರತಿನಿತ್ಯವೂ ನನ್ನ ಮೊಬೈಲ್‌ಗೆ ಬೆಳಗ್ಗೆ 5.30ಕ್ಕೆ ಮೊದಲ ಮೆಸೇಜ್ ಬರುವುದು ಅದು ನನ್ನ ತಾಯಿಯಿಂದಲೇ. `ಗುಡ್ ಮಾರ್ನಿಂಗ್ ಕಂದ’ ಎಂಬ ಸಂದೇಶ ಬರುತ್ತಿತ್ತು. ಅಮ್ಮನಿಂದ ನನಗೆ ಕೊನೆಯ ಸಲ ಸಂದೇಶ ಬಂದಿದ್ದು, ಅಕ್ಟೋಬರ್ 18ರಂದು. ಮಾರನೇ ದಿನ ಬೆಳಗ್ಗೆ ನಾನು ಬಿಗ್‌ಬಾಸ್ ಮನೆಯ ಸೆಟ್‌ನಲ್ಲಿದ್ದೆ. ಅಂದು ಅಮ್ಮನ ಸಂದೇಶ ನನಗೆ ತಲುಪಲೇ ಇಲ್ಲ. ಕಳೆದ ಹಲವು ವರ್ಷಗಳಿಂದ ನಾನು ಯಾವತ್ತೂ ಸಂದೇಶವನ್ನು ಮಿಸ್ ಮಾಡಿಕೊಂಡವನು ಅಲ್ಲ. ಇದೇ ಮೊದಲ ಬಾರಿಗೆ ಅಮ್ಮ ಸಂದೇಶ ಕಳುಹಿಸಲಿಲ್ಲ.
ನಾನೇ ಅಮ್ಮನ ಮೊಬೈಲ್‌ಗೆ ಸಂದೇಶ ಕಳುಹಿಸಿದೆ. ಕರೆ ಮಾಡಿ ಈ ಕುರಿತು ವಿಚಾರಿಸೋಣವೆಂದರೆ, ಬಿಗ್‌ಬಾಸ್ ಚಿತ್ರೀಕರಣದ ಒತ್ತಡದಲ್ಲಿದ್ದೆ. ಹಾಗಾಗಿ ಸಾಧ್ಯವಾಗಲಿಲ್ಲ. ಶನಿವಾರದ ಬಿಗ್‌ಬಾಸ್ ಎಪಿಸೋಡ್ ಚಿತ್ರೀಕರಣಕ್ಕಾಗಿ ಇನ್ನೇನು ವೇದಿಕೆಯ ಮೇಲೆ ಹತ್ತಬೇಕು ಎನ್ನುವಷ್ಟರಲ್ಲಿ ಅಮ್ಮನಿಗೆ ಹುಷಾರಿಲ್ಲದ, ಅವರು ಆಸ್ಪತ್ರೆಗೆ ದಾಖಲಾಗಿರುವ ಸಂದೇಶ ಬಂತು. ಕೂಡಲೇ ಸಹೋದರಿಗೆ ಕರೆ ಮಾಡಿ, ಡಾಕ್ಟರ್ ಜೊತೆ ಮಾತನಾಡಿ ನಾನು ಸ್ಟೇಜ್ ಮೇಲೆ ಹತ್ತಿದೆ.
ನಾನು ಚಿತ್ರೀಕರಣದಲ್ಲಿ ಇರುವಾಗಲೇ ಅಮ್ಮನ ಆರೋಗ್ಯ ಸ್ಥಿತಿ ಗಂಭೀರ ಅಂತ ನನ್ನ ತಂಡದವರು ತಿಳಿಸಿದರು. ಎಂತಹ ಅಸಹಾಯಕ ಸ್ಥಿತಿ ನನ್ನದು. ಮೊದಲ ಬಾರಿಗೆ ಇಂಥದ್ದೊಂದು ಸನ್ನಿವೇಶ ನನಗೆ ಎದುರಾಗಿದ್ದು. ಶೂಟಿಂಗ್ ಮಾಡುತ್ತಿರುವಾಗಲೇ ನನ್ನ ತಲೆಯಲ್ಲಿ ಹಲವಾರು ವಿಷಯಗಳು ಚಲಿಸುತ್ತಿದ್ದವು. ಸಾಕಷ್ಟು ಭಯವಿತ್ತು. ಶನಿವಾರದ ಎಪಿಸೋಡ್ ಮುಗಿಸಲೇಬೇಕು ಎನ್ನುವ ಒತ್ತಡವೂ ಇತ್ತು. ಎಲ್ಲವನ್ನೂ ನಿಭಾಯಿಸಬೇಕಿತ್ತು. ಮನಸ್ಸನ್ನು ಶಾಂತಚಿತ್ತಕ್ಕೆ ತಂದು ಶನಿವಾರದ ಎಪಿಸೋಡ್ ಮುಗಿಸಿಕೊಟ್ಟೆ. ಇದೆಲ್ಲವೂ ಸಾಧ್ಯವಾಗಿದ್ದು, ನನ್ನ ತಾಯಿ ಹೇಳಿಕೊಟ್ಟ ಪಾಠದಿಂದ.
ಎಲ್ಲ ಒತ್ತಡವನ್ನೂ ನಿಭಾಯಿಸಿಕೊಂಡು ಶನಿವಾರದ ಎಪಿಸೋಡ್ ಮುಗಿಸಿಕೊಟ್ಟು ಕೂಡಲೇ ಆಸ್ಪತ್ರೆಯತ್ತ ಧಾವಿಸಿದೆ. ನಾನು ಆಸ್ಪತ್ರೆ ತಲುಪುವ ಮುನ್ನವೇ ಅಮ್ಮನನ್ನು ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರು. ಅತ್ಯಂತ ನೋವಿನ ಸಂಗತಿ ಅಂದರೆ, ನನ್ನ ತಾಯಿ ಪ್ರಜ್ಞೆಯಲ್ಲಿರುವಾಗ ಕೊನೆಯ ಬಾರಿಗೆ ಅವರನ್ನು ನೋಡಲು ಆಗಲೇ ಇಲ್ಲ. ಅವರು ಕೊನೆಯುಸಿರು ಎಳೆಯುವ ಮುನ್ನ ಅಮ್ಮ ನೋವಿನಲ್ಲೇ ಸಾಕಷ್ಟು ಹೋರಾಡಿದ್ದಳು. ಕೆಲವೇ ಕೆಲವು ಗಂಟೆಗಳಲ್ಲಿ ಏನೆಲ್ಲ ಬದಲಾವಣೆ ಆಗಿದ್ದವು.
ಅಮ್ಮ ಇಲ್ಲ ಅನ್ನುವುದು ಸತ್ಯ. ಆದರೆ, ವಾಸ್ತವವನ್ನು ಹೇಗೆ ಸ್ವೀಕರಿಸಬೇಕು ಅನ್ನೋದು ಗೊತ್ತಾಗಲಿಲ್ಲ. ಮೊನ್ನೆಯಷ್ಟೇ ಚಿತ್ರೀಕರಣಕ್ಕೆ ಹೊರಡುವ ಮುನ್ನ ಬಿಸಿ ಅಪ್ಪುಗೆಯೊಂದನ್ನು ಕೊಟ್ಟು ಕಳುಹಿಸಿದ್ದರು. ಕೆಲವೇ ಕೆಲವು ಗಂಟೆಗಳಲ್ಲಿ ಇಲ್ಲವಾಗಿ ಹೋದರು. ನಾನು ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ. ಈ ಮಂಗಳಕರ ದಿನವು ಪ್ರಕೃತಿಯು ಈ ಭೂಮಿಯಿಂದ ತಾಯಿಯನ್ನು ಕರೆದುಕೊಂಡು ಹೋಗಿದೆ ಎಂದು ಸಮಾಧಾನಿಸಿಕೊಳ್ಳುವೆ. ನನ್ನ ಬದುಕಿನ ಅತ್ಯಂತ ಬೆಲೆಬಾಳುವ ಮುತ್ತೊಂದು ನನ್ನಿಂದ ಜಾರಿಹೋಗಿದೆ. ನನ್ನ ತಾಯಿ ಶಾಂತಿಯಿಂದಲೇ ತುಂಬಿರೋ ಮಡಿಲನ್ನು ಸೇರಿದ್ದಾರೆ ಎಂದು ಖಾತ್ರಿಯಿದೆ.
ಅಮ್ಮನಿಗೆ ಗೌರವ ಸಲ್ಲಿಸಲು ಆಗಮಿಸಿದ್ದ ಪ್ರತಿಯೊಬ್ಬರಿಗೂ ನಾನು ಋಣಿ ಮತ್ತು ಧನ್ಯವಾದಗಳನ್ನು ತಿಳಿಸುತ್ತೇನೆ. ಇದು ನಿಜವಾಗಿಯೂ ನಿಮ್ಮೆಲ್ಲರ ಕರುಣೆಯಾಗಿತ್ತು. ನನ್ನ ತಾಯಿ ಆತ್ಮಕ್ಕೆ ಶಾಂತಿ ಕೋರಿದ ಎಲ್ಲರಿಗೂ ಧನ್ಯವಾದಗಳು. ಅಮ್ಮಾ, ಚೆನ್ನಾಗಿ ವಿಶ್ರಾಂತಿ ಪಡೆಯಿರಿ. ನಾನು ನಿಮ್ಮನ್ನು ಸದಾ ಪ್ರೀತಿಸುತ್ತೇನೆ ಮತ್ತು ಅಮೂಲ್ಯವಾದದ್ದನ್ನು ಕಳೆದುಕೊಂಡಿದ್ದೇನೆ ಎಂದು ಸುದೀಪು ಬರೆದುಕೊಂಡಿದ್ದಾರೆ.