ಮೂಡುಬಿದಿರೆ: ಹೆಂಡತಿಯನ್ನು ಗಂಡ ಕೊಲೆಗೈದ ಘಟನೆ ತಾಲೂಕಿನ ಧರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಮಠ ಎಂಬಲ್ಲಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುನೀತಾ(30) ಕೊಲೆಯಾದಾಕೆ ಎಂದು ಗುರುತಿಸಲಾಗಿದೆ.
ಒಂದೂವರೆ ವರ್ಷದ ಹಿಂದೆ ಇವರು ದಿನ್ ರಾಜ್ ನನ್ನು ಮದುವೆಯಾಗಿದ್ದರು. ನಿನ್ನೆ ಸಂಜೆ ಗಂಡ- ಹೆಂಡತಿಯ ಮಧ್ಯೆ ಜಗಳ ನಡೆದಿದ್ದು, ಈ ಸಂದರ್ಭ ಜಗಳ ತಾರಕಕ್ಕೇರಿದಾಗ ಗಂಡ ದಿನ್ ರಾಜ್ ಹೆಂಡತಿಯ ತಲೆಗೆ ಹೊಡೆದಿದ್ದಾರೆ.
ಆಗ ರಕ್ತ ಸೋರುತ್ತಿರುವುದನ್ನು ಕಂಡ ದಿನ್ ರಾಜ್ ಸುನೀತಾ ಅವರ ಸಹೋದರ ಸಂಬಂಧಿಗೆ ಕರೆ ಮಾಡಿದ್ದಾನೆ.
ಆಗ ಅವರು ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದಾರೆ. ಮೊದಲಿಗೆ ಬೆಳುವಾಯಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ದಾಖಲಿಸಲು ನಿರಾಕರಿಸಿದ್ದಾಗ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಅಲ್ಲಿ ಅಧಿಕ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದ ಸುನೀತಾ ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಡ ಕುಟುಂಬದಲ್ಲಿ ಹುಟ್ಟಿದ್ದ ಸುನೀತಾ ತನ್ನ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಒಂದೂವರೆ ವರ್ಷಗಳ ಹಿಂದೆ ಸಂಬಂಧಿಕರು ಸೇರಿ ಮದುವೆ ಮಾಡಿಸಿದ್ದರು.
ತಾಯಿ ಒಬ್ಬಳೆ ಮನೆಯಲ್ಲಿ ಇದ್ದುದರಿಂದ ಸುನೀತಾ ತಾಯಿಮನೆಯಲ್ಲಿ ಉಳಿದುಕೊಂಡಿದ್ದು, ದಿನ್ ರಾಜ್ ಕೂಡಾ ಅಲ್ಲಿಯೇ ಇದ್ದು ಮೂಡುಬಿದಿರೆಯಲ್ಲಿ ಬ್ಯಾಟರಿ ಅಂಗಡಿಗೆ ಕೆಲಸಕ್ಕೆ ಬರುತ್ತಿದ್ದಾನೆನ್ನಲಾಗಿದೆ. ನಿನ್ನೆ ಸುನೀತಾ ಅವರ ತಾಯಿ ಪಕ್ಕದ ಮನೆಗೆ ಹೋದಾಗ ಘಟನೆ ನಡೆದಿದೆ. ಸದ್ಯ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಸಿದ್ದತೆ ನಡೆಸುತ್ತಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತರು ಭೇಟಿ ನೀಡಲಿದ್ದಾರೆ.