ಬಂಟ್ವಾಳ; ಅಪಘಾತದ ವಿಚಾರದಲ್ಲಿ ಗಂಡ ಹೆಂಡತಿಗೆ ನಾಲ್ವರು ಹಲ್ಲೆ ಮಾಡಿರುವ ಘಟನೆ ಕಲ್ಲಡ್ಕದ ಕರಿಂಗಾನ ಕ್ರಾಸ್ ಎಂಬಲ್ಲಿ ಎ.15ರಂದು ಸಂಜೆ ವೇಳೆ ನಡೆದಿದೆ. ಪುತ್ತೂರು ಏರ್ಮುಂಜ ಪಲ್ಲ ನಿವಾಸಿಗಳಾದ ಮಂಜುನಾಥ್ ಮತ್ತು ಅವರ ಪತ್ನಿ ಪೂರ್ಣಿಮಾ ಹಲ್ಲೆಗೊಳಗಾದವರು. ಹಲ್ಲೆಗೊಳಗಾದವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಜುನಾಥ್ ಅವರು ಮಂಗಳೂರಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ಕಲ್ಲಡ್ಕ ಸಮೀಪದ ನರಹರಿ ಎಂಬಲ್ಲಿ ಇವರ ಕಾರಿಗೆ ಹರಿಯಾಣ ಮೂಲದ ಕಾರೊಂದ ಓವರ್ ಟೇಕ್ ಮಾಡುವ ಭರದಲ್ಲಿ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಕೈ ಸನ್ನೆಯ ಮೂಲಕ ಪ್ರಶ್ನಿಸಿದಕ್ಕೆ ಅಪಘಾತ ಎಸಗಿದ ಕಾರು ಮುಂದೆ ಹೋಗಿ ಕರಿಂಗಾಣ ಕ್ರಾಸ್ ಎಂಬಲ್ಲಿ ಅಡ್ಡವಾಗಿ ಇರಿಸಿ ಮಂಜುನಾಥ್ ಹಾಗೂ ಅವರ ಪತ್ನಿ ಪೂರ್ಣಿಮಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ಪೂರ್ಣಿಮಾ ಅವರ ಕುತ್ತಿಗೆಯಲ್ಲಿದ್ದ ಬಂಗಾರದ ಚೈನ್ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಹಲ್ಲೆಯಿಂದ ಮಂಜುನಾಥ್ ಅವರ ಕಣ್ಣಿಗೆ ಏಟಾಗಿದ್ದು, ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ನಡೆದ ಕೂಡಲೇ ಸಂಚಾರ ಪೊಲೀಸರು ಭೇಟಿ ನೀಡಿ ವಾಹನವನ್ನು ಹಾಗೂ ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಅವರು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ಭಜರಂಗದಳ, ವಿಶ್ವಹಿಂದೂಪರಿಷತ್ ಕಲ್ಲಡ್ಕ ಪ್ರಖಂಡ ಖಂಡನೆ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ: ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ಟೀಕೆಗೆ ಗುರಿಯಾಗಿದ್ದ ಕಲ್ಲಡ್ಕದಲ್ಲಿ ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.
ಮಳೆ ದೂರವಾದ ಹಿನ್ನೆಲೆಯಲ್ಲಿ ಕಲ್ಲಡ್ಕದ ಪೂರ್ಲಿಪ್ಪಾಡಿ ಭಾಗದಿಂದ ಒಂದು ಬದಿಯಲ್ಲಿ ಡಾಮರು ಹಾಕಲಾಗುತ್ತಿದೆ.
ಕಳೆದ 2-3 ವರ್ಷಗಳಿಂದ ಹೆದ್ದಾರಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ಈ ಬಾರಿಯ ಮಳೆಗಾಲದಲ್ಲಿ ಕಲ್ಲಡ್ಕ ಪೇಟೆಯನ್ನು ಎಲ್ಲ ರೀತಿಯಿಂದಲೂ ಹಿಂಡಿ ಹಿಪ್ಪೆ ಮಾಡಲಾಗಿತ್ತು. ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳು ಎಂಬ ಸ್ಥಿತಿ ಇತ್ತು. ಹೆದ್ದಾರಿ ತುಂಬಾ ಕೆಸರು ತುಂಬಿ ನಡೆದಾಡುವುದು ಕಷ್ಟವಾಗಿರುವ ಜತೆಗೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಾಗುವುದು ತೀರಾ ತ್ರಾಸದಾಯಕವಾಗಿತ್ತು. ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.
ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಮಹಮ್ಮದ್ ಮುಸ್ತಾಫ(21) ಎಂಬಾತನನ್ನು ಕಂಬಕ್ಕೆ ಕಟ್ಟಿ ಹಾಕಿದ ಥಳಿಸಿದ ಆರು ಮಂದಿ ಆರೋಪಿಗಳನ್ನು ಬಂಟ್ವಾಳ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನವೆಂಬರ್ 7ರಂದು ರಾತ್ರಿ 10 ಗಂಟೆ ಸುಮಾರಿಗೆ ಕಂಚಿನಡ್ಕ ಪದವು ನಿವಾಸಿಯಾಗಿರುವ ಯುವತಿಯೊಬ್ಬಳು ಮಹಮ್ಮದ್ ಮುಸ್ತಾಫಾನನ್ನು ಮನೆಗೆ ಬರಲು ಹೇಳಿದ್ದು, ಆಕೆ ಸೂಚನೆಯಂತೆ ಮಹಮ್ಮದ್ ಮುಸ್ತಾಫಾ ಅಲ್ಲಿಗೆ ಹೋಗಿದ್ದ. ಈ ವೇಳೆ ಅಲ್ಲಿದ್ದ ಆರೋಪಿಗಳು ಮಹಮ್ಮದ್ ಮುಸ್ತಾಫ್ ನ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಂಪು ಸೇರಿಕೊಂಡು ಆತನನ್ನು ಹಿಡಿದು ರಕ್ತ ಒಸರುವಂತೆ ಥಳಿಸಿದ್ದಲ್ಲದೇ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.
ಮಹಮ್ಮದ್ ಮುಸ್ತಾಫ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಬಳಿಕ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಪೊಲೀಸರು ವಿಚಾರಣೆ ಮಾಡಲು ತೆರಳಿದಾದ ಮಹಮ್ಮದ್ ಮುಸ್ತಾಫ್ ಆರೋಪಿಗಳು ತನ್ನನ್ನು ಕೊಲೆ ನಡೆಸುವ ಉದ್ದೇಶದಿಂದ ಗುಂಪು ಸೇರಿ ಕಂಬಕ್ಕೆ ಕಟ್ಟಿ ಹಾಕಿ ಕೊಲೆಯತ್ನ ನಡೆಸಿದ್ದಾನೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ.