ಮಂಗಳೂರು/ಪ್ರಯಾಗರಾಜ್ : ಇಂದು ಬೆಳಗ್ಗೆ ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ಮಹಾ ಕುಂಭಮೇಳ ಆರಂಭಗೊಂಡಿದ್ದು, ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳು ಸಂಗಮಿಸುವ ಸ್ಥಳವಾದ ಸಂಗಮ್ ನಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಮೊದಲ ಪವಿತ್ರ ಸ್ನಾನ ಮಾಡಿದರು.
ಈ ಮಹಾ ಕುಂಭಮೇಳವು ಹೊಸ ವರ್ಷದ ಮೊದಲ ಹುಣ್ಣಿಮೆ ಅಂದರೆ ಇಂದು (ಜನವರಿ 13) ಆರಂಭವಾಗಿ 2025ರ ಮಹಾ ಶಿವರಾತ್ರಿಯ ದಿನ ಅಂದರೆ ಫೆಬ್ರವರಿ 26ರವರೆಗೆ ನಡೆಯಲಿದೆ.
ವಿಶ್ವದ ಮಾನವೀಯತೆಯ ಅತಿ ದೊಡ್ಡಸಭೆ ಎಂದು ಕರೆಯಲ್ಪಡುವ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮಹಾ ಕುಂಭಮೇಳವು 40 ಕೋಟಿಗೂ ಹೆಚ್ಚು ಜನರನ್ನು ಪ್ರಯಾಗರಾಜ್ ಗೆ ಕರೆತರುವ ನಿರೀಕ್ಷೆಯಿದೆ. ಇದು ಅಮೆರಿಕ ಮತ್ತು ರಷ್ಯಾದ ಜನಸಂಖ್ಯೆಗಿಂತಲೂ ಹೆಚ್ಚಾಗಿದೆ.
ಮೂರು ನದಿಗಳ ಸಂಗಮದಲ್ಲಿ ಭಕ್ತರ ಪವಿತ್ರ ಸ್ನಾನ
ದೇಶದ ಮೂರು ಮಹಾನದಿಗಳ (ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು) ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ಶಾಹಿ ಸ್ನಾನ ಮಾಡುವುದರಿಂದ ಜನರು ಮೋಕ್ಷವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ.
ಹೀಗಾಗಿ ದೇಶದ ಮೂಲೆ ಮೂಲೆಯಿಂದ ಜನ ಕುಂಭಮೇಳಕ್ಕೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭಕ್ತರಿಗಾಗಿ 10,000 ಹೆಕ್ಟೇರ್ ಗಳ ವಿಶಾಲವಾದ ಪ್ರದೇಶದಲ್ಲಿ 1.5 ಲಕ್ಷ ಟೆಂಟ್ ಗಳನ್ನು ನಿರ್ಮಿಸಲಾಗಿದೆ. ಶೌಚಾಲಯ, ಸ್ವಚ್ಛತೆ ಸೇರಿದಂತೆ ಮೊದಲೆಂದಿಗಿಂತಲೂ ಈ ಬಾರಿ ಭಕ್ತರಿಗಾಗಿ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಮಾಡಲಾಗಿದೆ.
ಇದನ್ನೂ ಓದಿ: ಮಹಾಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ರೈಲಿಗೆ ಕಲ್ಲು ತೂರಾಟ
ಮಹಾ ಕುಂಭಮೇಳದಿಂದ ಉತ್ತರಪ್ರದೇಶ ಸರ್ಕಾರ ಗಳಿಸುವ ಆದಾಯ ಎಷ್ಟು?
2025ರ ಮಹಾ ಕುಂಭಮೇಳದಿಂದ ಉತ್ತರಪ್ರದೇಶದ ಆರ್ಥಿಕತೆ, 2 ಲಕ್ಷ ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಪ್ರತಿ 40 ಕೋಟಿ ಸಂದರ್ಶಕರು ಸರಾಸರಿ 5,000 ರೂಪಾಯಿಗಳನ್ನು ಖರ್ಚು ಮಾಡಿದರೆ, ಮಹಾ ಕುಂಭಮೇಳದಿಂದ 2 ಲಕ್ಷ ಕೋಟಿ ಗಳಿಸಬಹುದು ಎಂದು ನೀರಿಕ್ಷಿಸಲಾಗಿದೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಪ್ರಕಾರ, ಪ್ಯಾಕ್ ಮಾಡಿದ ಆಹಾರಗಳು, ನೀರು, ಬಿಸ್ಕೆಟ್ ಗಳು, ಜ್ಯೂಸ್ ಮತ್ತು ಊಟ, ತಂಪು ಪಾನೀಯಗಳು ಸೇರಿದಂತೆ ಒಟ್ಟು ವ್ಯಾಪಾರದ ಮೂಲಕ 20,000 ಕೋಟಿ ಗಳಿಸಬಹುದು ಎಂದು ಅಂದಾಜಿಸಲಾಗಿದೆ.
ಅಲ್ಲದೆ ತೈಲ, ದೀಪಗಳು, ಗಂಗಾಜಲ, ವಿಗ್ರಹಗಳು, ಧೂಪದ್ರವ್ಯಗಳು, ಧಾರ್ಮಿಕ ಪುಸ್ತಕಗಳು ಮತ್ತು ಕೊಡುಗೆಗಳು ಆರ್ಥಿಕತೆಯ ಮತ್ತೊಂದು ಭಾಗವಾಗಿದ್ದು, ಅಂದಾಜು 20,000 ಕೋಟಿ ರೂ. ತಲುಪಬಹುದು ಎಂದು ನೀರಿಕ್ಷಿಸಲಾಗಿದೆ.
ಸ್ಥಳೀಯ ಮತ್ತು ಅಂತರಾಜ್ಯ ಸಾರಿಗೆ ಸೇವೆಗಳು, ಸರಕು ಸಾಗಣೆ ಮತ್ತು ಟ್ಯಾಕ್ಸಿಗಳು ಸೇರಿದಂತೆ ಸಾರಿಗೆ ಮತ್ತು ಲಾಜಿಸ್ಟಿಕ್ಸ್ 10,000 ಕೋಟಿ ರೂಪಾಯಿಗಳನ್ನು ಅಂದಾಜಿಸಲಾಗಿದೆ. ಅಲ್ಲದೆ ಪ್ರವಾಸೋದ್ಯಮ ಸೇವೆಗಳಾದ ಟೂರ್ ಗೈಡ್ ಗಳು, ಟ್ರಾವೆಲ್ ಪ್ಯಾಕೇಜ್ ಗಳು ಮತ್ತು ಇತರೆ ಮೂಲಗಳಿಂದ 10,000 ಕೋಟಿ ರೂಪಾಯಿಗಳು ಬರುವ ಸಾಧ್ಯತೆಯಿದೆ.
ತಾತ್ಕಲಿಕ ವೈದ್ಯಕೀಯ ಶಿಬಿರಗಳು, ಆಯುರ್ವೇದ ಉತ್ಪನ್ನಗಳು ಮತ್ತು ಔಷಧಗಳಿಂದ 3,000 ಕೋಟಿ ರೂ. ಆದಾಯ ನೀರಿಕ್ಷಿಸಿದರೆ, ಇ-ಟಿಕೆಟಿಂಗ್, ಡಿಜಿಟಲ್ ಪಾವತಿಗಳು, ವೈ-ಫೈ ಸೇವೆಗಳು ಮತ್ತು ಮೊಬೈಲ್ ಚಾರ್ಜಿಂಗ್ ಸ್ಟೇಷನ್ ಗಳಂತಹ ವಲಯಗಳಿಂದ 1,000 ಕೋಟಿ ರೂ. ಆದಾಯ ನೀರಿಕ್ಷಿಸಲಾಗಿದೆ. ಜಾಹೀರಾತು ಮತ್ತು ಪ್ರಚಾರ, ಮನರಂಜನೆ ಮತ್ತು ಮಾಧ್ಯಮಗಳ ಮೂಲಕ 10,000 ಕೋಟಿ ರೂ. ಆದಾಯ ಗಳಿಸಬಹುದೆಂದು ಅಂದಾಜಿಸಲಾಗಿದೆ.
2019ರಲ್ಲಿ ನಡೆದ ಪ್ರಯಾಗ್ ರಾಜ್ ನ ಅರ್ಧ ಕುಂಭಮೇಳವು ರಾಜ್ಯಕ್ಕೆ 1.2 ಲಕ್ಷ ಕೋಟಿ ರೂ. ಆದಾಯ ತಂದುಕೊಟ್ಟಿತ್ತು. ಇದರಲ್ಲಿ 24 ಕೋಟಿ ಭಕ್ತರು ಭಾಗಿಯಾಗಿದ್ದರು.
Pingback: ತಿರುಪತಿಯಲ್ಲಿ ಮತ್ತೊಂದು ಅವಘಡ; ಲಡ್ಡು ಕೌಂಟರ್ ನಲ್ಲಿ ಕಾಣಿಸಿಕೊಂಡ ಬೆಂಕಿ ! - NAMMAKUDLA NEWS - ನಮ್ಮಕುಡ್ಲ ನ್ಯೂಸ್