ಮಂಗಳೂರು : ಮಂಗಳೂರು ನಗರದ ಕಾವೂರು ಪಳನೀರು ಎಂಬಲ್ಲಿ ಬಡ ಕುಟುಂಬದ ಮನೆಯೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ಮನೆ ಹೊತ್ತಿ ಉರಿದ ಘಟನೆ ಸೋಮವಾರ ನಡೆದಿದೆ.
ಪಳನೀರು ನಿವಾಸಿ ಇಂದಿರಾ ಎಂಬವರಿಗೆ ಸೇರಿದ ಮನೆ ಹೊತ್ತಿ ಉರಿದು ಬಹುತೇಕ ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಸೋಮವಾರ ಬೆಳಗ್ಗೆ ಮನೆಮಂದಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಪ್ರಾರಂಭದಲ್ಲಿ ಮನೆಯ ಛಾವಣಿಯ ಪಕ್ಕಾಸ್ ಗೆ ತಗುಲಿದ ಬೆಂಕಿ ಬಳಿಕ ಹಾಲ್ ಮತ್ತು ಬೆಡ್ ರೂಮ್ ಗೆ ವ್ಯಾಪಿಸಿ ಸಂಪೂರ್ಣ ಸುಟ್ಟು ಹೋಗಿದೆ.
ಹೊಗೆ ಬರುವುದನ್ನು ಗಮನಿಸಿದ ಸ್ಥಳಿಯರು ಕೂಡಲೇ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು.
ಕದ್ರಿ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ನೆರವಿನಿಂದ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಈ ಅಗ್ನಿ ಅವಘಡ ಸಂಭವಿಸಿರ ಬಹುದೆಂದು ಶಂಕಿಸಲಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ಮನೆಯ ಕಾಗದ ಪತ್ರಗಳು, ಮತ್ತಿತರ ಅಮೂಲ್ಯ ಸೊತ್ತುಗಳು ಹೊತ್ತಿ ಉರಿದಿವೆ.
ವಾಸದ ಮನೆ ಅಗ್ನಿಗೆ ಆಹುತಿಯಾಗಿದ್ದರಿಂದ ಆಘಾತಕ್ಕೆ ಒಳಗಾಗಿರುವ ಬಡ ಕುಟುಂಬ ನೆಲೆ ಇಲ್ಲದೆ ಕಂಗಾಲಾಗಿದೆ.