ಉಡುಪಿ:ಅರಬ್ಬೀ ಸಮುದ್ರದಲ್ಲಿ ತೌಖ್ತಾ ಚಂಡಮಾರುತ ಕಾಣಿಸಿಕೊಂಡಿದ್ದು ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹಲವಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇತ್ತ ಉಡುಪಿ ಜಿಲ್ಲೆಯಲ್ಲೂ ತೌಖ್ತಾ ಚಂಡಮಾರುತ ಪ್ರಭಾವ ಕಾಣಿಸಿಕೊಂಡಿದೆ. ಬೆಳಗ್ಗಿನಿಂದ ಮಳೆಯ ಆರ್ಭಟ ಶುರುವಾಗಿದ್ದು, ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ.
ಮಲ್ಪೆ,ಪಡುಕೆರೆ ,ಉಪ್ಪುಂದದ, ಮರವಂತೆಯ ಕಡಲ ತಡಿಯಲ್ಲಿ ಭಾರೀ ಕಡಲ್ಕೊರೆತ ಉಂಟಾಗಿದೆ.ಕಡಲಿನ ಅಲೆಗಳು 30 ಮೀಟರ್ನಷ್ಟು ಮುಂದೆ ಬಂದಿದ್ದು, ಅಲೆಗಳ ಹೊಡೆತಕ್ಕೆ ಹಲವಾರು ತೆಂಗಿನ ಮರಗಳು ಸಮುದ್ರ ಪಾಲಾಗಿದೆ.
ಕಡಲಿನ ರೌದ್ರಾವತಾರ ಕಂಡು ಕಡಲ ತೀರದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.ಅಲೆಗಳ ತೀವ್ರತೆ ಹೀಗೆ ಮುಂದುವರೆದರೆ ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಮಳೆಯ ಕಾರಣದಿಂದ ಇಂದು ಉಡುಪಿ ಜಿಲ್ಲೆಗೆ ರೆಡ್ ಆಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಗುಡುಗು ಮಿಂಚು ಸಹಿತ ಗಾಳಿ ಮಳೆ ಸುರಿಯುತ್ತಿದೆ.ಇನ್ನು ಮುಂಜಾಗೃತಾ ಕ್ರಮವಾಗಿ ಮೀನುಗಾರರು ಬಲೆ, ಟಬ್, ಹಗ್ಗ, ಐಸ್ ಬಾಕ್ಸ್ ಶಿಫ್ಟ್ ಮಾಡಿದ್ದಾರೆ. ಕುಂದಾಪುರದ ತ್ರಾಸಿ , ಮೆಡಿಕಲ್ ಸಮೀಪದಲ್ಲೂ ಜನರನ್ನು ಸ್ಥಳಾಂತರ ಮಾಡಲಾಗಿದೆ.
ಮೀನುಗಾರಿಕಾ ಶೆಡ್ ಗಳನ್ನು ಕೂಡ ಸ್ಥಳಾಂತರ ಮಾಡಿದ್ದಾರೆ.ಮೇ 16ಹಾಗೂ 17ರಂದು ಆರೆಂಜ್ ಆಲರ್ಟ್, 18ಹಾಗೂ 19ರಂದು ಎಲ್ಲೋ ಆಲರ್ಟ್ ನ್ನು ಜಿಲ್ಲಾಡಳಿತ ಘೋಷಣೆ ಮಾಡಿದೆ.
ಕಡಲಿನ ತೀರದಲ್ಲಿ ಹಾಕಿದ ತಡೆಗೋಡೆಗಳಿಗೆ ಕಡಲಿನ ಅಲೆಗಳು ಅಪ್ಪಳಿಸುತ್ತಿವೆ. ಮೀನುಗಾರರಿಗೆ ಕಡಲಿಗಿಳಿಯದಂತೆ, ಸಮುದ್ರ ಭಾಗ ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚನೆ ನೀಡಿದೆ…