ಬೆಂಗಳೂರು : ಕನ್ನಡ ಚಿತ್ರರಂಗದ ಮೇರು ಪ್ರತಿಭೆ ಕಿಚ್ಚ ಸುದೀಪ್. ಹಲವು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕಲಾವಿದ. ತನ್ನ ನಟನೆಯಿಂದ, ವಿಶಿಷ್ಟ ಮ್ಯಾನರಿಸಂನಿಂದ ಕಂಗೊಳಿಸುತ್ತಿರೋ ಅಭಿಮಾನಿಗಳ ನೆಚ್ಚಿನ ನಟ. ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಮೆರೆದಿದ್ದಾರೆ. ಅವರ ಕಾರ್ಯಕ್ಕೆ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಲು ಮುಂದಾಗಿತ್ತು. ಆದರೆ, ಕಿಚ್ಚ ನಿರಾಕರಿಸಿದ್ದಾರೆ.
ಯಾಕೆ ಈ ನಿರ್ಧಾರ ?
ಅಭಿನಯ ಚಕ್ರವರ್ತಿ ಸುದೀಪ್ 40 ಕ್ಕೂ ಅಧಿಕ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ, ನಿರ್ದೇಶಕನಾಗಿ, ನಿರ್ಮಾಪಕನಾಗಿಯೂ ಸಾಧನೆ ಮೆರೆಯುತ್ತಿದ್ದಾರೆ. ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ಮಿಸಿದ್ದು ಮಾತ್ರವಲ್ಲದೇ, ರಿಯಾಲಿಟಿ ಶೋವನ್ನೂ ನಡೆಸಿಕೊಟ್ಟು ಜನಮನಸೂರೆಗೊಂಡಿದ್ದಾರೆ.
ಹೀಗಿರುವ ಅವರ ಸಾಧನೆಗೆ ಮೆಚ್ಚಿ ತುಮಕೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಗೌರವ ಡಾಕ್ಟರೇಟ್ ನೀಡುವ ಬಗ್ಗೆ ನಿರ್ಧರಿಸಿತ್ತು. ಈ ಬಗ್ಗೆ ಸುದೀಪ್ ಗಮನಕ್ಕೆ ತರಲಾಯಿತು. ಆದರೆ, ಕಿಚ್ಚ ವಿವಿ ನಿರ್ಧಾರವನ್ನು ನಯವಾಗಿ ತಿರಸ್ಕರಿಸಿದ್ದಾರೆ. ಹಾಗಂತ ತನ್ನನ್ನು ಆಯ್ಕೆ ಮಾಡಿರುವುದಕ್ಕೆ ಧನ್ಯವಾದ ತಿಳಿಸಲು ಮರೆತಿಲ್ಲ. ಆದರೆ, ಡಾಕ್ಟರೇಟ್ ಬೇಡ ಎಂದಿದ್ದಾರೆ. ‘ಸಮಾಜದಲ್ಲಿ ಸೇವೆ ಸಲ್ಲಿಸಿರುವ ನನಗಿಂತ ಹಿರಿಯರು ಹಲವರು ಇದ್ದಾರೆ. ಅವರಿಗೆ ಈ ಗೌರವ ನೀಡಿ’ ಎಂದು ಮನವಿ ಮಾಡಿದ್ದಾರೆ.
ಡಾಕ್ಟರೇಟ್ ಪ್ರದಾನ ಕಾರ್ಯಕ್ರಮ :
ನಾಳೆ (ಆಗಸ್ಟ್ 7) ತುಮಕೂರು ವಿಶ್ವ ವಿದ್ಯಾಲಯದಲ್ಲಿ ಗೌರವ ಡಾಕ್ಟರೇಟ್ ಪದವಿ ಸಮಾರಂಭ ನಡೆಯುತ್ತಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ. ಕೈಗಾರಿಕೋದ್ಯಮಿ ಎಚ್. ಜಿ.ಚಂದ್ರಶೇಖರ್, ಜಲಕ್ರೀಡಾ ಸಾಹಸಿಗ ಹಾಗೂ ಸಾಮಾಜಿಕ ಕಾರ್ಯಕರ್ತ ಸಿ. ಎಸ್ ನಾಗಾನಂದನ ಸ್ವಾಮಿ ಮತ್ತು ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು.
36 ಪಿಹೆಚ್‌ಡಿ, 1758 ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುತ್ತಿದೆ. ನಟ ಸುದೀಪ್ ಮನರಂಜನೆ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಡಾಕ್ಟರೇಟ್ ಗೌರವ ನೀಡಲು ವಿವಿ ನಿರ್ಧರಿಸಿತ್ತು. ಆದರೆ, ಕಿಚ್ಚ ಸುದೀಪ್ ನಿರಾಕರಿಸಿದ್ದಾರೆ.
ಇದನ್ನೂ ಓದಿ : ‘ಮಂಜುಮ್ಮೆಲ್ ಬಾಯ್ಸ್’ ಸಿನೆಮಾಗೆ ಕೊನೆಗೂ ಬಿಗ್ ರಿಲೀಫ್..!!
ಕಿಚ್ಚ ಸಿನಿಮಾದಲ್ಲಿ ಬ್ಯುಸಿ :
ಕಿಚ್ಚ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ‘ಮ್ಯಾಕ್ಸ್’ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಟೀಸರ್ ಈಗಾಗಲೇ ನಿರೀಕ್ಷೆ ಹೆಚ್ಚಿಸಿದೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ನಿರ್ದೇಶನ ಚಿತ್ರಕ್ಕಿದೆ. ತಮಿಳು ನಿರ್ದೇಶಕ ಚೇರನ್ ಸಿನಿಮಾವನ್ನು ಸುದೀಪ್ ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಅನೂಪ್ ಭಂಡಾರಿ ‘ಬಿಲ್ಲ ರಂಗ ಭಾಷ’ ಸಿನಿಮಾ ಕಿಚ್ಚ ಕೈಯಲ್ಲಿದೆ.
Pingback: Watch Video: ನೃತ್ಯ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ ಶಿಕ್ಷಕ! - NAMMAKUDLA NEWS - ನಮ್ಮಕುಡ್ಲ ನ್ಯೂಸ್