ಮಂಗಳೂರು: ಮಂಗಳೂರಿನ ಸರಿಪಳ್ಳದ ರಾಹುಲ್ ಎಂಬ ಯುವಕ ಇತ್ತೀಚೆಗೆ ನಡೆದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಡ ಕುಟುಂಬದ ಆತನ ಚಿಕಿತ್ಸೆಗಾಗಿ ನೆರವಾಗುವ ನಿಟ್ಟಿನಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಷಷ್ಠಿ ದಿನವಾದ ಇಂದು ಮಂಗಳೂರಿನ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಭವತಿ ಭಿಕ್ಷಾಂ ದೇಹಿ ಅಭಿಯಾನ ನಡೆಸಿ ದೇಣಿಗೆಯನ್ನು ಸಂಗ್ರಹಿಸಿದರು.
ವಿಶ್ವ ಹಿಂದೂ ಪರಿಷತ್ , ಭಜರಂಗದಳ ಅಡ್ಯಾರ್ ಶಾಖೆ ವತಿಯಿಂದ ಈ ಅಭಿಯಾನವನ್ನು ಇಂದು ಕುಡುಪು ದೇವಸ್ಥಾನ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಆಯೋಜನೆ ಮಾಡಲಾಗಿತ್ತು.
ವಿಚಿತ್ರ ವೇಷಭೂಷಣದ , ಕೈಯಲ್ಲಿ ಡಬ್ಬಿ ಹಿಡಿದ ಕಾರ್ಯಕರ್ತರು ಯುವಕನಿಗೆ ನೆರವಾಗಿ ಎಂದು ಮನವಿ ಮಾಡಿ ಹಣ ಸಂಗ್ರಹಿಸಿದರು.
ಈ ಸಂದರ್ಭ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಂಘಟನೆ ನಾಯಕ ಪ್ರದೀಪ್ ಸರಿಪಳ್ಳ, ರಾಹುಲ್ ಚಿಕಿತ್ಸೆಗಾಗಿ ದಾನ ಕೇಳುತ್ತಿದ್ದೇವೆ. ಎಲ್ಲರೂ ಆತನಿಗೆ ನೆರವಾಗಬೇಕು ಎಂದು ವಿನಂತಿ ಮಾಡಿದರು.
13 ಲಕ್ಷದಷ್ಟು ಹಣ ಖರ್ಚಾಗಿದ್ದು, 20 ಲಕ್ಷಕ್ಕೂ ಅಧಿಕ ಹಣ ಬೇಕಾಗಿದೆ. ಜನತೆ ನೆರವಾಗಬೇಕು ಎಂದರು.