ಪುತ್ತೂರು: ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಜನರನ್ನು ಮತಾಂತರ ಮಾಡುವ ಉದ್ದೇಶದಿಂದ ಶಿವಮೊಗ್ಗದಿಂದ ಜನರು ಬಂದಿದ್ದಾರೆ ಎಂಬ ಮಾಹಿತಿ ಮೇರೆಗೆ
ಹಿಂದೂ ಸಂಘಟನೆ ಕಾರ್ಯಕರ್ತರು ನೆಲ್ಯಾಡಿ ಹೊರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ನಿನ್ನೆ ನಡೆದಿದೆ. ಆದರೆ ಪೊಲೀಸರು ಭೇಟಿ ನೀಡಿದಾಗ ಅಲ್ಲಿ ಮತಾಂತರ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಜೂನ್ 4ರ ಸಂಜೆ ಶಿವಮೊಗ್ಗದ ಶಿಕಾರಿಪುರ ಭಾಗದಿಂದ 30ಕ್ಕೂ ಹೆಚ್ಚು ಹಿಂದೂ ಧರ್ಮದ ಜನರು ಕೆಎಸ್ಆರ್ಟಿಸಿ ಬಸ್ಸಿನ ಮೂಲಕ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಆರ್ಲ ಎಂಬಲ್ಲಿಯ ಮೋರಿಯ ಕ್ರೈಸ್ತ ಜ್ಞಾನ ಮಂದಿರಕ್ಕೆ ಬಂದಿಳಿದಿದ್ದಾರೆ.
ಹಿಂದೂ ಕಾರ್ಯಕರ್ತರು ಕೂಡ ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ನೆಲ್ಯಾಡಿ ಹೊರಠಾಣೆ ಪೊಲೀಸರು ಬಂದವರನ್ನು ಪ್ರಶ್ನಿಸಿದಾಗ ಕೆಲವರು ತಮ್ಮ ನೆಮ್ಮದಿಗಾಗಿ ಹಾಗೂ ಆರೋಗ್ಯ ಸುಧಾರಣೆಗೆ ಇಲ್ಲಿಗೆ ಭೇಟಿ ನೀಡಿದ್ದೇವೆ.
ಈ ಹಿಂದೆಯೂ ಇಲ್ಲಿಗೆ ಅನೇಕ ಬಾರಿ ಬಂದಿದ್ದೇನೆ ಎಂದಿದ್ದಾರೆ. ಇನ್ನು ಕೆಲವರು ತಾವು ಯಾಕೆ ಬಂದಿದ್ದೇವೆ ಎಂಬುದೇ ಗೊತ್ತಿಲ್ಲ ಎಂದಿದ್ದಾರೆ.
ಪೊಲೀಸರ ಪರಿಶೀಲನೆಯ ವೇಳೆ ಇಲ್ಲಿ ಶಿವಮೊಗ್ಗ ಜಿಲ್ಲೆಗೆ ಸೇರಿದ 27 ಮಂದಿ ಪತ್ತೆಯಾಗಿದ್ದರು. ಇದರಲ್ಲಿ 18 ಹೆಂಗಸರು, 8 ಗಂಡಸರು ಹಾಗೂ ಒಬ್ಬ 6 ವರ್ಷದ ಬಾಲಕನೂ ಸೇರಿದ್ದನು.
ಸ್ಥಳಕ್ಕೆ ಭೇಟಿ ನೀಡಿದ ಉಪ್ಪಿನಂಗಡಿ ಠಾಣಾಧಿಕಾರಿ ಕುಮಾರ್ ಕಾಂಬ್ಳೆ ಜೂ 5ರ ಬೆಳಗ್ಗೆ ಇಲ್ಲಿಂದ ಮರಳಿ ಶಿವಮೊಗ್ಗಕ್ಕೆ ವಾಪಸಾಗುವಂತೆ ಬಂದಿರುವ ಎಲ್ಲರಿಗೂ ತಿಳಿಸಿದ್ದಾರೆ.
ಈ ಭಾಗದಲ್ಲಿ ಅನ್ಯ ಚಟುವಟಿಕೆಗಳನ್ನು ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ.