ಕುಂದಾಪುರ: ಶಾಲಾ ಕಾಲೇಜುಗಳಲ್ಲಿ ವಸ್ತ್ರಸಂಹಿತೆ ಬಗ್ಗೆ ರಾಜ್ಯ ಸರ್ಕಾರದ ಆದೇಶದ ನಂತರವೂ ಹಿಜಾಬ್-ಕೇಸರಿ ಶಾಲು ಗಲಾಟೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
ಇಂದು ಕುಂದಾಪುರದ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಪ್ರವೇಶಿಸಲು ಯತ್ನಿಸಿದ್ದಾರೆ.
ಇಂದು ಬೆಳಗ್ಗೆ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಕಾಲೇಜಿನ ಪ್ರಮುಖ ರಸ್ತೆಯಿಂದ ಕಾಲೇಜಿನತ್ತ ಮೆರವಣಿಗೆಯಲ್ಲಿ ಕಾಲೇಜು ಆವರಣದೊಳಗೆ ಪ್ರವೇಶಿಸಲು ಯತ್ನಿಸಿದ್ದಾರೆ.
ಈ ವೇಳೆ ಕಾಲೇಜಿನ ಮೈದಾನದಲ್ಲಿ ಪ್ರಾಂಶುಪಾಲರು ವಿದ್ಯಾರ್ಥಿಗಳ ಅಡ್ಡ ಹಾಕಿದ್ದಾರೆ. ನಂತರ ಕೇಸರಿ ಶಾಲು ಹಾಕಿ ಕಾಲೇಜಿಗೆ ಪ್ರವೇಶ ಇಲ್ಲ ಎಂದು ಹೇಳಿದ್ದಾರೆ.
ಈ ವೇಳೆ ಕಾಲೇಜಿನ ಆವರಣಕ್ಕೆ ಸ್ಕಾರ್ಫ್, ಬುರ್ಖಾ ಹಾಕಿ ಬರುವಂತಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.
ಉಳಿದ ವಿದ್ಯಾರ್ಥಿಗಳು ಬುರ್ಖಾ, ಹಿಜಾಬ್ ಧರಿಸಿ ಬಂದರೆ ನಾವು ಕೇಸರಿ ಶಾಲು ಧರಿಸಿ ಬರುತ್ತೇವೆ ಎಂದಿದ್ದಾರೆ. ಈ ವೇಳೆ ಕೇಸರಿ ಶಾಲು ಅಥವಾ ಹಿಜಾಬ್‌ಗೆ ಅವಕಾಶ ಇಲ್ಲ ಎಂದು ಪ್ರಾಂಶುಪಾಲ ಗಣೇಶ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದ್ದಾರೆ. ಇದಕ್ಕೆ ಒಪ್ಪಿದ ವಿದ್ಯಾರ್ಥಿಗಳು ಶಾಲು ತೆಗೆದು ಕ್ಲಾಸಿಗೆ ಹೋಗಿದ್ದಾರೆ.
ಗಂಗೊಳ್ಳಿಯಲ್ಲೂ ಹಿಜಾಬ್-ಕೇಸರಿ ಶಾಲು ಗಲಾಟೆ
ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ಭುಗಿಲೆದ್ದಿದೆ. ಕಾಲೇಜಿಗೆ ಕೇಸರಿ ಶಾಲು ಹಾಗೂ ಹಿಜಾಬ್ ಧರಿಸಿ ಪ್ರವೇಶಿಸಲು ಯತ್ನಿಸಿದ್ದಾರೆ. ಈ ವೇಳೆ ಪ್ರಾಂಶುಪಾಲರು ಧ್ವನಿವರ್ಧಕದ ಮೂಲಕ ಮಕ್ಕಳಿಗೆ ಸರಕಾರದ ಆದೇಶವನ್ನು ಓದಿ ಹೇಳಿದ್ದಾರೆ.
ಈ ವೇಳೆ ಕೇಸರಿ ತೆಗೆದು ವಿದ್ಯಾರ್ಥಿಗಳು ತರಗತಿಗೆ ಹೋಗಿದ್ದಾರೆ. ಆದರೆ ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ಹಿಜಾಬ್‌ಗಾಗಿ ಪಟ್ಟು ಹಿಡಿದಿದ್ದಾರೆ. ಸದ್ಯ ಈ ಯುವತಿಯರ ಮನವೊಲಿಕೆಗೆ ಪ್ರಯತ್ನ ನಡೆಯುತ್ತಿದೆ.