ಬೆಂಗಳೂರು: ರಾಜ್ಯದಾದ್ಯಂತ ಇಂದೂ ಸಹ ಹಿಜಾಬ್ ಗಲಾಟೆ ಜೋರಾಗಿದ್ದು, ತುಮಕೂರಿನಲ್ಲಿ ಸೆಕ್ಷನ್ 144 ಉಲ್ಲಂಘನೆ ಆರೋಪದಡಿ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ಕೇಸು ದಾಖಲಾಗಿದೆ. ಜೊತೆಗೆ ಮತ್ತೊಂದೆಡೆ ಉಪನ್ಯಾಸಕಿಯೊಬ್ಬರು ರಾಜೀನಾಮೆ ನೀಡಿದ್ದಾರೆ.
ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಲ್ಲಿಯೂ ಮುಸ್ಲಿಂ ವಿದ್ಯಾರ್ಥಿನಿಯರ ಹೋರಾಟ, ವಿರೋಧ ಇಂದು ಕೂಡ ಮುಂದುವರಿದಿದೆ.
ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 144 ಉಲ್ಲಂಘನೆ ಆರೋಪದಡಿ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ಕೇಸು ದಾಖಲಾಗಿದೆ.
ಅತಿಥಿ ಉಪನ್ಯಾಸಕಿ ರಾಜೀನಾಮೆ: ಧಾರ್ಮಿಕ ಗುರುತು ಇರುವ ಬಟ್ಟೆಗಳನ್ನು ಧರಿಸಿ ಬರುವಂತಿಲ್ಲ ಎಂದು ಕೋರ್ಟ್ ಆದೇಶದಂತೆ ಸರ್ಕಾರ ನಮಗೆ ಸೂಚನೆ ನೀಡಿದೆ,
ಹೀಗಾಗಿ ನೀವು ಹಿಜಾಬ್ ಧರಿಸಿ ತರಗತಿಯೊಳಗೆ ಹೋಗಿ ಪಾಠ ಮಾಡುವಂತಿಲ್ಲ ಎಂದು ಪ್ರಾಂಶುಪಾಲರು ಹೇಳಿದ ಹಿನ್ನೆಲೆಯಲ್ಲಿ ನೊಂದು ಚಾಂದಿನಿ ನಾಜ್ ಎಂಬ ಅತಿಥಿ ಉಪನ್ಯಾಸಕಿ ರಾಜೀನಾಮೆ ನೀಡಿರುವ ಪ್ರಸಂಗ ನಡೆದಿದೆ.
ತುಮಕೂರಿನ ಜೈನ್ ಪಿಯು ಕಾಲೇಜಿನಲ್ಲಿ ಚಾಂದಿನಿಯವರು ಕಳೆದ ಮೂರು ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಹಿಜಾಬ್ ಧರಿಸುವುದು ನಮ್ಮ ಧರ್ಮದಲ್ಲಿ ಆತ್ಮಗೌರವಕ್ಕೆ, ಹಿಜಾಬ್ ತೆಗೆಯಿರಿ
ಎಂದು ಹೇಳುವ ಮೂಲಕ ನನ್ನ ಆತ್ಮಗೌರವಕ್ಕೆ ಧಕ್ಕೆಯುಂಟಾಗಿದೆ ಎಂದು ಅತಿಥಿ ಉಪನ್ಯಾಸಕಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಎಂದು ಚಾಂದಿನಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಚಾಂದಿನಿ ನಾಜ್ ವಿಡಿಯೊ ಮಾಡಿ ಕಳೆದ ಮೂರು ವರ್ಷಗಳಿಂದ ನಾನು ಜೈನ್ ಕಾಲೇಜಿನಲ್ಲಿ ವೃತ್ತಿ ನಿರ್ವಹಿಸುತ್ತಿದ್ದೆ. ಅಲ್ಲಿಂದ ಇಲ್ಲಿವರೆಗೂ ಏನೂ ತೊಂದರೆ ಆಗಿರಲಿಲ್ಲ.
ಆದರೆ ನಿನ್ನೆ ಪ್ರಾಂಶುಪಾಲರು ಕರೆದು ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ಸಂಕೇತದ ಬಟ್ಟೆ ಧರಿಸಿ ಪಾಠ ಮಾಡಬಾರದು ಎಂದು ಆದೇಶ ಬಂದಿದೆ ಎಂದು ಹೇಳಿದ್ದರು.
ಆದರೆ ನಾನು ಮೂರು ವರ್ಷದಿಂದ ಹಿಜಾಬ್ ಧರಿಸಿಯೇ ಪಾಠ ಮಾಡ್ತಾ ಇದ್ದೆ.
ಈ ಬೆಳವಣಿಗೆಯಿಂದಾಗಿ ನನ್ನ ಆತ್ಮಗೌರಕ್ಕೆ ಧಕ್ಕೆ ಉಂಟಾಯಿತು. ಈ ಎಲ್ಲ ಬೆಳವಣಿಗೆಯಿಂದ ನಿನ್ನೆ ದಿನ ನನ್ನ ಕೆಲಸಕ್ಕೆ ರಾಜಿನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.