ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್‌ಗೆ ಕರ್ತವ್ಯದ ವೇಳೆ ಬಾಡಿವೋರ್ನ್ ಕ್ಯಾಮೆರಾಗಳನ್ನು ಅಳವಡಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಪೊಲೀಸ್ ಸಿಬ್ಬಂದಿಗೆ ಬಾಡಿವೋರ್ನ್ ಕ್ಯಾಮೆರಾ ಅಳವಡಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ವಕೀಲೆ ಗೀತಾಮಿಶ್ರಾ ಸಾರ್ವಜನಿಕ ಹಿತಾಸಕ್ತಿಗಾಗಿ ಅರ್ಜಿ ಹಾಕಿದ್ದರು.
ಭ್ರಷ್ಟಾಚಾರ ನಿಯಂತ್ರಣ ಹಾಗೂ ಮೇಲ್ವಿಚಾರಣೆಯ ಮುಖ್ಯ ಉದ್ದೇಶವನ್ನಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಟ್ರಾಫಿಕ್ ಪೊಲೀಸರು ಬಾಡಿ ಕ್ಯಾಮರಾ ಧರಿಸುವುದರಿಂದ ಸಿಬ್ಬಂದಿಯ ಭ್ರಷ್ಟಾಚಾರ ನಿಯಂತ್ರಿಸಬಹುದು. ಹಿರಿಯ ಅಧಿಕಾರಿಗಳು ತಮ್ಮ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಯನ್ನು ಠಾಣೆಯಿಂದಲೇ ಮೇಲ್ವಿಚಾರಣೆ ಮಾಡಬಹುದು.
ಬಾಡಿ ಕ್ಯಾಮರಾ ಅಳವಡಿಸಿಕೊಂಡರೆ ತಪ್ಪಿತಸ್ಥರೇ ತಿರುಗಿ ಬಿದ್ದಂತಹ ಸಂದರ್ಭಗಳಲ್ಲಿ ಪೊಲೀಸರಿಗೂ ರಕ್ಷಣೆ ಸಿಗಲಿದೆ.
ಆದ್ದರಿಂದ ಬೆಂಗಳೂರು ನಗರ ಪೊಲೀಸರಿಗಾಗಿ ಖರೀದಿಸಿರುವ 50 ಬಾಡಿ ಕ್ಯಾಮರಾ ಬಳಸುವಂತೆ ನಿರ್ದೇಶಿಸಬೇಕು.
ಅಲ್ಲದೆ ರಾಜ್ಯಾದ್ಯಂತ ಪೊಲೀಸರು ನಡೆಸುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಅನುಕೂಲವಾಗುವಂತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಾಡಿ ಕ್ಯಾಮರಾ ಖರೀದಿಸಲು ಮತ್ತು ಪೊಲೀಸರಿಗೆ ಅಳವಡಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿಯನ್ನು ಸಲ್ಲಿಸಿದ್ದರು.
ಈ ಹಿನ್ನೆಲೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ವಿಭಾಗೀಯ ಪೀಠಕ್ಕೆ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಕಾರ್ಯಾದೇಶದ ಪ್ರತಿ ಸಲ್ಲಿಸಿದ್ದಾರೆ. ಪೊಲೀಸರಿಗೆ ಅಳವಡಿಸಲು ಒಟ್ಟು 2,860 ಬಾಡಿವೋರ್ನ್ ಕ್ಯಾಮೆರಾ ಖರೀದಿಗಾಗಿ ಕಾರ್ಯಾದೇಶ ಹೊರಡಿಸಲಾಗಿದೆ.
ಈಗಾಗಲೇ 1097 ಕ್ಯಾಮೆರಾಗಳನ್ನು ಒಪ್ಪಂದ ಮಾಡಿಕೊಂಡಿರುವ ಸಂಸ್ಥೆಗಳು ಪೂರೈಸಿವೆ. ಉಳಿದ ಕ್ಯಾಮೆರಾಗಳನ್ನು ಖರೀದಿಸಿ, ಸಿಬ್ಬಂದಿಗೆ ತರಬೇತಿ ನೀಡಿ, ಅಳವಡಿಸಲಾಗುವುದು ಎಂದು ತಿಳಿಸಿದರು.
ಅರ್ಜಿದಾರರ ಪರ ವಕೀಲ ಜಿ.ಆರ್ ಮೋಹನ್ ವಾದಿಸಿ, ಸರ್ಕಾರ ಹಿಂದೆಯೂ 75 ಲಕ್ಷ ರೂ ಖರ್ಚು ಮಾಡಿ 50 ಕ್ಯಾಮೆರಾ ಖರೀದಿಸಿತ್ತು. ಒಂದನ್ನೂ ಬಳಕೆ ಮಾಡಿಲ್ಲ. ಹೀಗಾಗಿಯೇ ಪಿಐಎಲ್ ಸಲ್ಲಿಸಬೇಕಾಯಿತು. ಆದ್ದರಿಂದ ಕ್ಯಾಮೆರಾಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡುವಂತೆ ನಿರ್ದೇಶಿಸಬೇಕು ಎಂದು ಕೋರಿದರು.
ವಾದ ಆಲಿಸಿದ ಪೀಠ, ಬಾಡಿವೋರ್ನ್ ಕ್ಯಾಮೆರಾಗಳನ್ನು ಖರೀದಿಸಿದ ಬಳಿಕ ಅವುಗಳನ್ನು ಸಮರ್ಪಕವಾಗಿ ಬಳಸಲು ಸರ್ಕಾರ ಪೊಲೀಸರಿಗೆ ಸೂಚಿಸಬೇಕು. ಸ್ಮಾರ್ಟ್ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಸುಧಾರಿಸಲು ಕೂಡ ಇಂತಹ ಕ್ಯಾಮೆರಾಗಳನ್ನು ಬಳಕೆ ಮಾಡಬೇಕು ಎಂದು ಆದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು.