ಪ್ರಯಾಗ್ ರಾಜ್‌ನಲ್ಲಿ ಆರಂಭವಾಗಿರುವ ಮಹಾಕುಂಭ ಮೇಳಕ್ಕೆ ಲೆಕ್ಕವಿಲ್ಲದಷ್ಟು ನಾಗಾಸಾಧುಗಳ ಆಗಮನವಾಗಿದೆ. ಕುಂಭ ಮೇಳದಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ನಾಗಾ ಸಾಧುಗಳು ಇದುವರೆಗೆ ಎಲ್ಲಿದ್ರು ? ಇವರು ನಾಗಾಸಾಧುಗಳಾಗಿ ಬದಲಾಗಿದ್ದು ಹೇಗೆ ? ನಾಗಾಸಾಧುಗಳಲ್ಲಿ ಎಷ್ಟು ವಿಧವಾದ ಗುಂಪು ಇದೆ ಮತ್ತು ಅವರು ನಾಲ್ಕು ಶಾಹಿ ಸ್ನಾನದಲ್ಲಿ ಎಲ್ಲೆಲ್ಲಿ ತೀರ್ಥಸ್ನಾನ ಮಾಡ್ತಾರೆ ಅನ್ನೋ ಕುರಿತು ಮಾಹಿತಿ ಇಲ್ಲಿದೆ.
ನಾಗಾ ಸಾಧುಗಳು ಆಗೋದು ಹೇಗೆ ?
ಯಾರಲ್ಲಿ ತನ್ನನ್ನು ತಾನೇ ಕಳೆದುಕೊಳ್ಳಬೇಕು ಎಂಬ ಆಲೋಚನೆ ಉಂಟಾಗುತ್ತದೆಯೋ ಮತ್ತು ತನ್ನನ್ನು ತಾನು ದೇವರ ಜೊತೆ ಕಲ್ಪಿಸಿಕೊಳ್ಳುತ್ತಾನೋ ಅಂತವರು ನಾಗಾಸಾಧುಗಳಾಗುತ್ತಾರೆ. ಹಾಗಂತ ನಾಗಾ ಸಾಧು ಆಗಬೇಕು ಅಂದರೆ ಅದಕ್ಕೆ ಕಠಿಣ ವೃತಾಚರಣೆಯ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಇಂತಹ ಪರೀಕ್ಷೆಯಲ್ಲಿ ಪಾಸ್ ಆದ್ರೆ ಮಾತ್ರ ಅಂತಹ ವ್ಯಕ್ತಿಗೆ ನಾಗಾಸಾಧುಗಳಾಗಿ ದೀಕ್ಷೆ ಪಡೆಯಲು ಸಾಧ್ಯ.
ನಾಗಾ ಸಾಧು ಎಂಬ ಪರಂಪರೆ ಆರಂಭ ಯಾವಾಗ ?
ನಾಗ ಎಂಬ ಪದ ಸಂಸ್ಕೃತದ ನಗ್ ಎಂಬ ಪದದಿಂದ ಬಂದಿದ್ದು, ಸಂಸ್ಕತದಲ್ಲಿ ನಗ್ ಅಂದರೆ ಪರ್ವತ ಎಂದು ಅರ್ಥ. ಪರ್ವತ ಅಥವಾ ಪರ್ವತದ ಗುಹೆಯಲ್ಲಿ ವಾಸವಾಗುವ ಸನ್ಯಾಸಿಗಳೇ ಈ ನಾಗಾ ಸಾಧುಗಳು. 9 ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯ ಅವರಿಂದ ಈ ಪರಂಪರೆ ಆರಂಭವಾಯಿತು ಅನ್ನೋ ಐತಿಹ್ಯ ಇದೆ. ಶಂಕರಾಚಾರ್ಯರು ಸ್ಥಾಪಿಸಿದ ದಶನಾಮಿ ಸಂಪ್ರದಾಯದ ಭಾಗವೇ ಈ ನಾಗಾಸಾಧುಗಳು. ದಶನಾಮಿ ಎಂಬುವುದು ಒಂದು ಸಂನ್ಯಾಸ ಮಠ ಪಂಕ್ತಿಯಾಗಿದ್ದು, ಇದು ಹತ್ತು ಉಪಶಾಖೆಯನ್ನು ಹೊಂದಿದೆ. ಇದರಲ್ಲೇ ನಾಗಸಾಧುಗಳು ಸಾಮಾನ್ಯವಾಗಿ ಗಿರಿ , ಪುರಿ, ಮತ್ತು ಭಾರತೀ ಎಂಬ ಉಪಶಾಖೆಯಲ್ಲಿ ಸೇರಿದ ಸಂನ್ಯಾಸಿಗಳಾಗಿದ್ದಾರೆ.
ನಾಗ ಸಾಧುಗಳಲ್ಲಿ ಎರಡು ವಿಧ ಮೂರು ಹಂತದ ಸಾಧಕರು..!
ನಾಗ ಸಾಧುಗಳಲ್ಲಿ ಎಡರು ವಿಭಾಗವಿದ್ದು, ಒಂದು ಶಸ್ತ್ರಧಾರಿ ನಾಗ ಸಾಧು ಎಂದು ಕರೆಯಲ್ಪಡುತ್ತಿದ್ದು ಇವರು ಯುದ್ಧಕಲೆಗಳಲ್ಲಿ ಪರಿಣಿತಿಯನ್ನು ಪಡೆದುಕೊಂಡು ಕೈನಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ತಿರುಗಾಡುತ್ತಿರುತ್ತಾರೆ. ಮತ್ತೊಂದು ವಿಭಾಗ ಶಾಸ್ತ್ರಧಾರಿ ನಾಗ ಸಾಧು ಎಂದು ಕರೆಯಲ್ಪಡುತ್ತಿದ್ದು ಇವರು ಶಾಸ್ತ್ರಗಳ ಅಧ್ಯಯನ ಮಾಡಿಕೊಂಡು ಜ್ಞಾನದ ಕೋಲನ್ನು ಹಿಡಿದುಕೊಂಡು ತಿರುಗಾಡುತ್ತಾರೆ. ಈ ಶಸ್ತ್ರಧಾರಿ ನಾಗಾಸಾಧುಗಳನ್ನು ಮೊದಲು ಪರಿಚಯಿಸಿದ್ದು ಶೃಂಗೇರಿ ಮಠ ಎಂಬ ಇತಿಹಾಸ ಇದೆಯಾದ್ರೂ ಅದಕ್ಕೆ ಸರಿಯಾದ ಪುರಾವೆಗಳು ಸಿಕ್ಕಿಲ್ಲ. ಆರಂಭದಲ್ಲಿ ಶಸ್ತ್ರನಾಗ ತಂಡದಲ್ಲಿ ಕ್ಷತ್ರಿಯರನ್ನು ಮಾತ್ರ ಸೇರಿಸಲಾಗುತ್ತಿದ್ದು, ಬಳಿಕ ಅದರಿಂದ ಜಾತಿಬೇದವನ್ನು ಅಳಿಸಲಾಗಿತ್ತು ಎಂದು ಹೇಳಲಾಗುತ್ತದೆ.