ಮಳೆ ಅಬ್ಬರಕ್ಕೆ ಕಡೂರು ತತ್ತರ : ಬಟ್ಟೆ ಅಂಗಡಿಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟ..!
ಚಿಕ್ಕಮಗಳೂರು : ಬಂಗಾಳಕೊಲ್ಲಿಯಲ್ಲಿನ ಮೇಲ್ಮೈ ಗಾಳಿಯಿಂದ ರಾಜ್ಯದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಮಧ್ಯಾಹ್ನ 3 ಗಂಟೆಯಿಂದ ಆರಂಭವಾದ ಧಾರಾಕಾರ ಮಳೆ ಸುಮಾರು 1 ಗಂಟೆಗಳ ಕಾಲ ಎಡೆಬಿಡದೆ ಸುರಿದು ಸಾಕಷ್ಟು ಅನಾಹುತಗಳನ್ನ ಸೃಷ್ಟಿಸಿದೆ.
ಕಡೂರು ಪಟ್ಟಣದ ಮಂಗಲ್ ಜ್ಯೋತಿ ಬಟ್ಟೆ ಅಂಗಡಿಗೆ ನುಗ್ಗಿದ ಮಳೆ ನೀರು ಇಡೀ ಬಟ್ಟೆ ಅಂಗಡಿಯನ್ನು ನಾಶ ಮಾಡಿದೆ. ಕಡೂರು ಪಟ್ಟಣದಲ್ಲಿ ಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ.
ದಿಢೀರ್ ಸುರಿದ ಮಳೆಯಿಂದ ಚರಂಡಿ ತುಂಬಿ ನೀರು ಹೋಗಲು ಜಾಗವಿಲ್ಲದ ಅಂಡರ್ಗ್ರೌಂಡ್ನಲ್ಲಿದ್ದ ಬಟ್ಟೆ ಅಂಗಡಿಯೊಳಗೆ ನುಗ್ಗಿದೆ.
ಅಂಗಡಿಯೊಳಗೆ ಸುಮಾರು ಮೂರ್ನಾಲ್ಕು ಅಡಿಯಷ್ಟು ನೀರು ನಿಂತಿದ್ದು, ಲಕ್ಷಾಂತರ ಮೌಲ್ಯದ ಬಟ್ಟೆಗಳು ಸಂಪೂರ್ಣ ನೀರು ಪಾಲಾಗಿವೆ. ಅಂತಿಮವಾಗಿ ಅಂಗಡಿಯೊಳಗೆ ತುಂಬಿದ್ದ ನೀರನ್ನು ಮೋಟಾರ್ ಇಟ್ಟು ಹೊರಗಡೆ ಹಾಕಲಾಯಿತು.
ಮಳೆ ಹಾಗೂ ನೀರಿನ ರಭಸಕ್ಕೆ ಬಟ್ಟೆ ಅಂಗಡಿ ಪಕ್ಕದಲ್ಲಿದ್ದ ಜ್ಯುವೆಲರಿ ಶಾಪ್ ಒಳಗೂ ನೀರು ನುಗ್ಗಿದೆ.ಇನ್ನು, ಮಳೆ-ಗಾಳಿಯ ಅಬ್ಬರಕ್ಕೆ ಕಡೂರಿನ ರಾಗಿ ಗುಡ್ಡೆ ಕೂಡ ಕೊಚ್ಚಿ ಹೋಗಿದೆ.
ಒಕ್ಕಲು ಮಾಡಿ ಕಣದಲ್ಲಿ ಒಣಗಲು ಹಾಕಿದ್ದ ರಾಗಿ ಮಳೆನೀರಿನ ಜೊತೆ ರಾಗಿಯೂ ಕೊಚ್ಚಿ ಹೋಗಿದೆ. ತಾಲೂಕಿನಲ್ಲ ದಿಢೀರ್ ಸುರಿದ ಮಳೆಯಿಂದ ರೈತರು ಹಾಗೂ ಜನಸಾಮಾನ್ಯರು ಕಂಗಾಲಾಗಿದ್ದಾರೆ.
ರಾಜ್ಯದಲ್ಲಿ ಸುರಿಯುತ್ತಿರೋ ಅಕಾಲಿಕ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೋಗೆಹಳ್ಳಿಯಲ್ಲಿ ಜೆಸಿಬಿ ಚಾಲಕನೋರ್ವ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾನೆ.
ಕೆರೆಯಲ್ಲಿ ಮಣ್ಣು ತುಂಬುವ ಕೆಲಸ ಮಾಡುತ್ತಿದ್ದ ಜೆಸಿಬಿ ಚಾಲಕ ನೀರು ಬರುತ್ತಿದ್ದುದನ್ನು ಕಂಡು ಜೆಸಿಬಿಯನ್ನು ಮೇಲೆ ತರಲು ಯತ್ನಿಸಿದ್ದಾನೆ. ಆದರೆ, ಸಾಧ್ಯವಾಗಿಲ್ಲ.
ಕೆರೆಯಲ್ಲಿ ನೋಡ-ನೋಡುತ್ತಿದ್ದ ನೀರಿನ ಹರಿವಿನ ಪ್ರಮಾಣ ಕೂಡ ಜಾಸ್ತಿಯಾಗುತ್ತಿದೆ, ಕೆರೆಯೂ ಕ್ರಮೇಣ ತುಂಬುತ್ತಿತ್ತು.ಜೆಸಿಬಿ ಚಾಲಕನಿಗೆ ನುಗ್ಗುತ್ತಿರೋ ನೀರಿಗೆ ವಿರುದ್ಧವಾಗಿ ಜೆಸಿಬಿಯನ್ನು ಏರಿ ಮೇಲೆ ತರೋದು ಅಸಾಧ್ಯವಾಗಿತ್ತು.
ಹಾಗಾಗಿ, ಮಣ್ಣನ್ನು ತೆಗೆದು ಜೆಸಿಬಿಯನ್ನು ಮೇಲೆ ತರಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೆರೆಯಲ್ಲಿ ನೀರು ಜಾಸ್ತಿಯಾಗಿ ಜೆಸಿಬಿ ಅರ್ಧ ನೀರಿನಲ್ಲಿ ಮುಳುಗಿತ್ತು.
ಇನ್ನು ಜೆಸಿಬಿಯನ್ನ್ನನು ಮೇಲೆ ತರುವುದು ಅಸಾಧ್ಯವೆಂದು ಅರಿವಾದ ಕೂಡಲೇ ಜೆಸಿಬಿ ಚಾಲಕ ಜೆಸಿಬಿಯನ್ನು ಕೆರೆಯಲ್ಲೇ ಬಿಟ್ಟು ಮೇಲೆ ಬಂದು ಪ್ರಾಣ ಉಳಿಸಿಕೊಂಡಿದ್ದಾನೆ.