ಪುತ್ತೂರು : ಕರಾವಳಿ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿದಿದ್ದು, ಮುಂದಿನ ಮೂರು ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಈ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜುಲೈ 16 ವರೆಗೆ ಆರೆಂಜ್ ಅಲರ್ಟ್ ಘೋಷಿಸಿಲಾಗಿದೆ. ಭಾರೀ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ತುಂಬಿ ಹರಿಯುತ್ತಿದೆ.
ಘಟ್ಟ ಪ್ರದೇಶಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಘಟ್ಟ ಪ್ರದೇಶಗಳಿಂದ ಹರಿದು ಬರುವ ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಭಾರೀ ಹೆಚ್ಚಳವಾಗಿದೆ.
ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟ ನದಿ ನೀರಿನಿಂದ ಸಂಪೂರ್ಣ ಮುಳುಗಡೆಯಾಗಿದೆ. ಅಲ್ಲದ ಸುಬ್ರಹ್ಮಣ್ಯ ಹಳೆಯ ಕುಮಾರಧಾರಾ ಸೇತುವೆಯೂ ಭಾಗಶ ಮುಳುಗಡೆಯಾಗಿದೆ.
ಅಲ್ಲದೆ ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಪ್ರತೀ ಬಾರಿ ಮುಳುಗಡೆಯಾಗುವ ಹೊಸ್ಮಠ ಸೇತುವೆಯೂ ಭಾರೀ ಮಳೆಗೆ ಮುಳುಗಡೆಯಾಗಿದೆ.
ಆದರೆ ಈ ಸೇತುವೆಗೆ ಪರ್ಯಾಯ ನೂತನ ಸೇತುವೆ ನಿರ್ಮಾಣವಾಗಿರುವ ಕಾರಣ ಹಳೆ ಸೇತುವೆ ಮುಳುಗಡೆಯಿಂದಾಗಿ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಕೋವಿಡ್ ಅನ್ ಲಾಕ್ ಮಾರ್ಗಸೂಚಿ ಜಾರಿಯಲ್ಲಿರುವ ಕಾರಣ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಭಕ್ತರು ಕುಮಾರಧಾರಾ ಸ್ನಾನಘಟ್ಟದಲ್ಲಿ ತೀರ್ಥಸ್ನಾನಕ್ಕೆ ಆಗಮಿಸುತ್ತಾರೆ.
ಸ್ನಾನಘಟ್ಟ ಮುಳುಗಡೆಯಾದ ಕಾರಣ ನದಿಗೆ ಇಳಿಯದಂತೆ ದೇವಸ್ಥಾನದ ಕಡೆಯಿಂದ ಭಕ್ತಾಧಿಗಳಿಗೆ ನಿರಂತರವಾಗಿ ಸೂಚನೆ ನೀಡಲಾಗುತ್ತಿದೆ.
ಸಿಬ್ಬಂದಿಗಳ ಎಚ್ಚರಿಕೆಯ ಬಳಿಕವೂ ಕೆಲವೊಂದು ಭಕ್ತಾಧಿಗಳು ನದಿಗೆ ಇಳಿದು ತೀರ್ಥಸ್ನಾನ ಮಾಡುವ ದುಸ್ಸಾಹಸಕ್ಕೂ ಮುಂದಾಗುತ್ತಿರುವುದು ಸ್ನಾನಘಟ್ಟದ ಸಿಬ್ಬಂದಿಗಳ ಆತಂಕಕ್ಕೂ ಕಾರಣವಾಗಿದೆ. ಕುಮಾರಧಾರಾ ನದಿಯ ಜೊತೆಗೆ ಇನ್ನೊಂದು ನದಿ ನೇತ್ರಾವತಿಯಲ್ಲೂ ನೀರಿನ ಹರಿವು ಹೆಚ್ಚಳವಾಗಿದೆ.
ಅಲ್ಲದೆ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳ ಸಂಗಮ ಕ್ಷೇತ್ರವಾಗ ಉಪ್ಪಿನಂಗಡಿಯಲ್ಲಿ ನದಿಪಾತ್ರದ ಜನರನ್ನು ಎಚ್ಚರಿಕೆಯಲ್ಲಿರುವಂತೆ ಸೂಚಿಸಲಾಗಿದೆ. ಈಗಾಗಲೇ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನದಿ ತೀರದಲ್ಲಿ ತುರ್ತು ಸ್ಪಂದನೆಗಾಗಿ ಎರಡು ಬೋಟ್ ಗಳನ್ನು ಸಿದ್ಧಗೊಳಿಸಲಾಗಿದ್ದು, ಗೃಹರಕ್ಷಕ ದಳದ ಸಿಬ್ಬಂದಿಗಳನ್ನೂ ಸ್ಥಳದಲ್ಲಿ ನಿಯೋಜಿಸಲಾಗಿದೆ.
ಮುಳುಗಡೆಯ ಭೀತಿಯಲ್ಲಿರುವ ನದಿ ಪಾತ್ರದ ಜನರನ್ನು ಅನಿವಾರ್ಯ ಸಂದರ್ಭದಲ್ಲಿ ಬೇರೆಡೆಗೆ ಸ್ಥಳಾಂತರಿಸುವ ನಿಟ್ಟಿನಲ್ಲೂ ಎಲ್ಲಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ.
ಭಾರೀ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಸಣ್ಣಪುಟ್ಟ ಗುಡ್ಡ ಕುಸಿತದ ಘಟನೆಗಳೂ ವರದಿಯಾಗಿದ್ದು, ಯಾವುದೇ ಸಾವುನೋವು ಸಂಭವಿಸಿಲ್ಲ. ಮಳೆ ಹೆಚ್ಚಾದಂತೆ ಕರಾವಳಿ ತೀರದ ಜನರಲ್ಲೂ ಆತಂಕ ಹೆಚ್ಚಾಗಿದ್ದು, ಕಡಲು ಕೊರೆತದ ಭೀತಿಯೂ ಹೆಚ್ಚಾಗಿದೆ.
ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಹಾಗೂ ಬಟ್ಟಪ್ಪಾಡಿಯಲ್ಲಿ ಕಡಲು ಕೊರೆತದ ಆತಂಕ ಮತ್ತೆ ಎದುರಾಗಿದ್ದು,ಅರಬ್ಬೀ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳೂ ಏಳಲು ಆರಂಭಿಸಿದೆ.
ಸಮುದ್ರದ ಅಲೆಗಳ ಸದ್ದು ಕಿಲೋಮೀಟರ್ ದೂರಕ್ಕೂ ಕೇಳಿ ಬರಲಾರಂಭಿಸಿದೆ. ಮಳೆಯ ಜೊತೆಗೆ ಭಾರೀ ಗಾಳಿಯೂ ಬೀಸಲಾರಂಭಿಸಿದ್ದು, ಸುಬ್ರಹ್ಮಣ್ಯ ಹಾಗೂ ಇತರ ಪ್ರದೇಶಗಳಲ್ಲಿ ಮರಗಳು ಬಿದ್ದು, ವಿದ್ಯುತ್ ಪೂರೈಕೆಯೂ ವ್ಯತ್ಯಯವಾಗಿದೆ.