ಮಂಗಳೂರು: ಮಂಗಳೂರು ನಗರ ಮತ್ತು ಹೊರವಲಯದಲ್ಲಿ ಇಂದು ಮುಂಜಾನೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಮುಖ ರಸ್ತೆಗಳಲ್ಲೇ ನೀರು ನಿಂತಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಮಕ್ಕಳಿಗೆ ಶಾಲೆಗೆ ಬರಲು ತೊಂದರೆಯಾದ ಕಡೆಗಳೆಲ್ಲ ರಜೆ ಘೋಷಿಸಿ ದ.ಕ ಜಿಲ್ಲಾಧಿಕಾರಿ ಆದೇಶವನ್ನು ಹೊರಡಿಸಿದ್ದಾರೆ.
ಭಾರೀ ಮಳೆಯ ಕಾರಣ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದಾರೆ. ನಗರದ ಪಂಪ್‌ವೆಲ್, ತೊಕ್ಕೊಟ್ಟು, ಕೊಟ್ಟಾರ ಚೌಕಿ ಮತ್ತಿತರ ಕೆಲವು ಜಂಕ್ಷನ್‌ಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲಾಗದೆ ನಿಂತಿವೆ.
ಇನ್ನು ಪಂಪ್ವೆಲ್‌ನಲ್ಲಿ ಪೈಪ್ ಒಡೆದು ಹೋಗಿರುವ ಕಾರಣ ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ವಾಹನಗಳಿಗೆ ಸರಾಗವಾಗಿ ಹೋಗಲಾಗದೇ ಸಂಚಾರ ಆಮೆಗತಿಯಲ್ಲಿ ಸಾಗುತ್ತಿದೆ.
ರಾ.ಹೆ. 75ರ ಅಡ್ಯಾರ್ ಸಮೀಪದ ಕಣ್ಣೂರು ಮತ್ತು ತೊಕ್ಕೊಟ್ಟು-ಮೆಲ್ಕಾರ್ ರಸ್ತೆಯನ್ನು ಸಂಪರ್ಕಿಸುವ ಹಲವು ಕಡೆಗಳಲ್ಲೂ ಕೂಡ ನೀರು ನಿಂತಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ನಗರದ ಹಲವು ಕಡೆಗಳಲ್ಲೂ ನೀರು ತುಂಬಿಕೊಂಡಿದ್ದು, ಪಾದಚಾರಿಗಳಿಗೆ, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಮಂಗಳೂರಿನ ನೀರುಮಾರ್ಗ ಸಮೀಪದ ಬದನಡಿ ಕ್ಷೇತ್ರ ಆವರಣಕ್ಕೆ ಭಾರೀ ನೀರು ನುಗ್ಗಿದ್ದು, ಮಳೆ ನೀರಿನಿಂದ ಜಲಾವೃತ್ತಗೊಂಡಿದೆ.
ಈ ದಿನ ಮಳೆ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಈಗಾಗಲೆ ಮಕ್ಕಳು ಶಾಲೆಗಳಿಗೆ ಬಂದಿದ್ದಲ್ಲಿ ಎಲ್ಲಾ ಮುಂಜಾಗೃತೆ ವಹಿಸಿ ಕಾರ್ಯ ನಿರ್ವಹಿಸುವುದು, ಮಕ್ಕಳು ಶಾಲೆಗೆ ಬರಲು ಅನಾನುಕುಲವಾದ ಪ್ರದೇಶದಲ್ಲಿ ಅಂತಹ ಮಕ್ಕಳಿಗೆ ಈ ದಿನ ರಜೆ ಸಾರಲಾಗಿದೆ.
ಶಿಕ್ಷಣ ಇಲಾಖಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ದ.ಕ. ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಇನ್ನು ಪಕ್ಕದ ಉಡುಪಿ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಟ್ಟ ಮೋಡ ಕವಿದ ವಾತಾವರಣವಿದ್ದು, ಇಂದು ಮುಂಜಾನೆಯಿಂದಲೇ ಭಾರೀ ಮಳೆಯಾಗುತ್ತಿದೆ.
ನಿನ್ನೆ ರಾತ್ರಿಯಿಂದಲೇ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜನ ಹೈರಾಣಾಗಿ ಹೋಗಿದ್ದಾರೆ.