ಹಾಸನ : ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಅಪಹರಣಕ್ಕೆ ಒಳಗಾಗಿದ್ದ ಯುವಕನ ಶವ ಪತ್ತೆಯಾದ ಘಟನೆ ಹಾಸನ ಜಿಲ್ಲೆಯ ಯೋಗೀಹಳ್ಳಿಯಲ್ಲಿ ನಡೆದಿದೆ.
26 ವರ್ಷ ಪ್ರಾಯದ ಲಿಖಿತ್‌ಗೌಡ ಯಾನೆ ಬಂಗಾರಿ ಕೊಲೆಯಾದ ಯುವಕ. ಈತನನ್ನು ಕೊಲೆ ಮಾಡಿ ಶವವನ್ನು ಅರಣ್ಯದಲ್ಲಿ ಎಸೆದಿರ ಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತ್‌ಗೌಡ ಎಂಟು ತಿಂಗಳ ಹಿಂದೆ ವಿವಾಹವಾಗಿದ್ದ.
ಲಿಖಿತ್‌ಗೌಡನಿಂದ ನವೀನ್ ಎಂಬಾತ 2.5 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಸಾಲ ಹಿಂದಿರುಗಿಸದ್ದರಿಂದ ಲಿಖಿತ್‌ಗೌಡ ಹಾಗೂ ನವೀನ್ ನಡುವೆ ಜಗಳ ನಡೆದಿತ್ತು.
ಇದರಿಂದ ಕೋಪಗೊಂಡ ಲಿಖಿತ್‌ಗೌಡ 10 ಲಕ್ಷ ರೂಯಾಯಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದು, ಇದು ಅವರಿಬ್ಬರೊಳಗಿನ ವೈಮನಸ್ಸು ಮತ್ತಷ್ಟು ಹೆಚ್ಚಲು ಕಾರಣವಾಗಿತ್ತು.
ಫೆ.5 ರಂದು ಸಂಜೆ ಹಣ ಕೊಡುವುದಾಗಿ ಹೇಳಿ ನವೀನ್ ಮತ್ತು ಸಾಗರ್ ಎಂಬವರು ಲಿಖಿತ್‌ಗೌಡನನ್ನು ಕರೆದುಕೊಂಡು ಹೋಗಿದ್ದರು.
ಅಂದಿನಿಂದ ಎಲ್ಲರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಲಿಖಿತ್‌ಗೌಡ ಪತ್ನಿ ಸಂಪ್ರೀತಾ ಹಾಗೂ ಕುಟುಂಬದವರು ಹಾಸನದ ಬಡಾವಣೆ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಯೋಗೀಹಳ್ಳಿ ಅರಣ್ಯದಲ್ಲಿ ಯುವಕನ ಶವ ಇರುವ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ್ದು, ಅದು ಲಿಖಿತ್‌ಗೌಡನ ಶವ ಎಂದು ಗುರುತಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಮಾರ್ಗದರ್ಶನ ನೀಡಿದ್ದಾರೆ.