Connect with us

DAKSHINA KANNADA

ಹರಿನಾರಾಯಣ ಎಡನೀರು ‘ಕದ್ರಿ ವಿಷ್ಣು ಪ್ರಶಸ್ತಿ’ಗೆ ಆಯ್ಕೆ

Published

on

ಮಂಗಳೂರು: ತೆಂಕುತಿಟ್ಟಿನ ಖ್ಯಾತ ಬಣ್ಣದ ವೇಷಧಾರಿ ಹರಿನಾರಾಯಣ ಭಟ್ ಎಡನೀರು ಅವರು ಕದ್ರಿ ಯಕ್ಷ ಬಳಗದವರು ಕೊಡಮಾಡುವ 2022ನೇ ಸಾಲಿನ ಪ್ರತಿಷ್ಠಿತ “ಕದ್ರಿ ವಿಷ್ಣು ಪ್ರಶಸ್ತಿ”ಗೆ ಆಯ್ಕೆ ಆಗಿದ್ದಾರೆ ಎಂದು ಸಂಘಟಕ ಕದ್ರಿ ನವನೀತ ಶೆಟ್ಟಿ ಅವರು ತಿಳಿಸಿದ್ದಾರೆ.


ಶ್ರೀ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಕೋಳ್ಯೂರು ರಾಮಚಂದ್ರರಾಯರಿಂದ ನೃತ್ಯ ಕಲಿತು, ಕಟೀಲು ಮೇಳಕ್ಕೆ ಬಾಲ ಕಲಾವಿದನಾಗಿ ಸೇರಿ ಕೋಡಂಗಿ,ಬಾಲಗೋಪಾಲ ವೇಷಧಾರಿಯಾಗಿ ಹಂತಹಂತವಾಗಿ ಕಲಾಸಾಧನೆ ಮಾಡಿ ಬಣ್ಣದ ವೇಷಧಾರಿಯಾಗಿ ಸಿದ್ದಿ ಪ್ರಸಿದ್ದಿ ಪಡೆದಿರುವ ಹರಿನಾರಾಯಣ ಅವರು ಕಳೆದ 30 ವರ್ಷಗಳಿಂದ ನಿರಂತರವಾಗಿ ಶ್ರೀ ಕಟೀಲು ಮೇಳದಲ್ಲಿ ಕಲಾವ್ಯವಸಾಯ ಮಾಡುತ್ತಿದ್ದಾರೆ.


ಋತುಪರ್ಣ, ರಕ್ತಬೀಜಾಸುರ, ಶಿಶುಪಾಲ,ಹಿರಣ್ಯಾಕ್ಷ ,ಅರ್ಜುನ ಮೊದಲಾದ ಪಾತ್ರಗಳಲ್ಲಿ ಕದ್ರಿ ,ಕಟೀಲು ಮೇಳಗಳಲ್ಲಿ ಮೆರೆದಿದ್ದ ಖ್ಯಾತ ರಾಜವೇಷಧಾರಿ ಕೀರ್ತಿಶೇಷ ಕದ್ರಿ ವಿಷ್ಣು ಅವರ ಸ್ಮರಣಾರ್ಥ ಕದ್ರಿಯ ಯಕ್ಷ ಬಳಗದವರು ಸಾಧಕ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದಾರೆ.

ನವೆಂಬರ್ 25 ಶುಕ್ರವಾರ ಶ್ರೀ ಕ್ಷೇತ್ರ ಕದ್ರಿಯಲ್ಲಿ ನಡೆಯಲಿರುವ ಶ್ರೀ ಕಟೀಲು ಮೇಳದ ಸೇವೆಯಾಟದ ಸಂದರ್ಭದಲ್ಲಿ ಸಂಮಾನ ಕಾರ್ಯಕ್ರಮ ಜರಗಲಿದೆ.

DAKSHINA KANNADA

ಆಸ್ಪತ್ರೆಯಲ್ಲೇ ಜೀವನ ಸಾಗಿಸುತ್ತಿರುವ ಮಹಿಳೆ; ಸಣ್ಣ ಪ್ರಾಯದಲ್ಲೇ ಹಲವು ಶಸ್ತ್ರ ಚಿಕಿತ್ಸೆ

Published

on

ಸುಳ್ಯ: ಮಹಿಳೆಯೊಬ್ಬರು ಅಪರೂಪದ ಕಾಯಿಲೆಗೆ ತುತ್ತಾಗಿ ತಮ್ಮ 34ರ ಹರೆಯದಲ್ಲೇ ಇದೀಗ 13ನೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ.ಚಾಂದಿನೆ ಎಮಬ ಹೆಸರಿನ ಮಹಿಳೆಗೆ ಆಸ್ಪತ್ರೆಯೇ ಬದುಕಾಗಿಬಿಟ್ಟಿದೆ. ಶಸ್ತ್ರ ಚಿಕಿತ್ಸೆ ಮಾತ್ರವಲ್ಲದೆ ಈಗಾಗಲೇ ಕೃತಕ ಉಸಿರಾಟ, ಶಾಕ್ ಟ್ರೀಟ್ಮೆಂಟ್, ಕಿಮೋಥೆರಪಿ ಸೇರಿದಂತೆ ಕಳೆದ 31 ವರ್ಷಗಳಲ್ಲಿ ತಮ್ಮ ಜೀವನವನ್ನು ಬಹುತೇಕವಾಗಿ ಆಸ್ಪತ್ರೆಯಲ್ಲೇ ಕಳೆದಿರುವ ಮಹಿಳೆಯ ಬದುಕು ನಿಜಕ್ಕೂ ಮೈ ನಡುಗಿಸುವಂತದ್ದು.

ಬದುಕಲ್ಲಿ ಏನಿಲ್ಲದಿದ್ದರೂ ಪರವಾಗಿಲ್ಲ ಆದರೆ ಆರೋಗ್ಯವೊಂದು ಸರಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಇದರಿಂದಲೇ ಕನ್ನಡದಲ್ಲಿ ‘ಆರೋಗ್ಯವೇ ಭಾಗ್ಯ’ ಎಂಬ ಗಾದೆಯೂ ಇದೆ. ಅನೇಕರು ತಮ್ಮ ಜೀವನದಲ್ಲಿ ಆಸ್ಪತ್ರೆಯ ಮೆಟ್ಟಿಲನ್ನೇ ಹತ್ತಿರುವುದಿಲ್ಲ. ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡು, ಗಟ್ಟಿ ಮುಟ್ಟಾಗಿ ಇರುತ್ತಾರೆ. ಇನ್ನು ಕೆಲವರು ಆಗಾಗ ಕಾಯಿಲೆ, ರೋಗಗಳನ್ನು ತಂದಳೆದುಕೊಂಡು ಸದಾ ಆಸ್ಪತ್ರೆಯತ್ತ ಮುಖ ಮಾಡಿರುತ್ತಾರೆ. ಆದರೆ, ಇಲ್ಲೊಬ್ಬಳು ಮಹಿಳೆಗೆ ಆಸ್ಪತ್ರೆಯೇ ಬದುಕಾಗಿದೆ. ಈಕೆಯ ಕರುಣಾಜನಕ ಕಥೆ ಕೇಳಿದ್ರೆ ಖಂಡಿತ ಕಣ್ಣಂಚಲ್ಲಿ ನೀರು ಬರುತ್ತದೆ.

ಚಾಂದಿನಿಗೆ ಇರುವ ಖಾಯಿಲೆ ಏನು ?

ಸುಳ್ಯದ ನಾವೂರಿನ ದಿ. ಧನಂಜಯ ಮತ್ತು ಸರೋಜನಿ ದಂಪತಿ ಪುತ್ರಿ ಚಾಂದಿನಿಗೆ ತನ್ನ 3ರ ಹರೆಯದಲ್ಲೇ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿತ್ತು. ತನ್ನ ದೇಹವನ್ನು ಆವರಿಸಿಕೊಂಡ ಕಾಯಿಲೆಯ ಅರಿವೇ ಇಲ್ಲದ ಚಾಂದಿನಿ 7ನೆ ತರಗತಿ ವರೆಗೂ ಸುಳ್ಯದ ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ಕಲಿತರಾದರೂ ಬಳಿಕ ಸಾಂಪ್ರದಾಯಿಕ ಶಾಲಾ, ಕಾಲೇಜು ಶಿಕ್ಷಣದಿಂದ ವಂಚಿತರಾದರು. ತಿಂಗಳಲ್ಲಿ 10 ದಿನ ಮನೆಯಲ್ಲಿದ್ದರೆ, ಉಳಿದ 20 ದಿನ ಆಸ್ಪತ್ರೆಯಲ್ಲಿ ಇರಬೇಕಾಗಿದ್ದ ಚಾಂದಿನಿಗೆ ತಾಯಿಯೇ ಶಿಕ್ಷಕಿಯಾದರು.

ಬಡತನದ ನಡುವೆಯೂ ತನ್ನ ಮಗಳ ಚಿಕಿತ್ಸೆಗಾಗಿ ತಂದೆ ತನ್ನ ದುಡಿಮೆಯ ಹಣವನ್ನೆಲ್ಲಾ ವಿನಿಯೋಗಿಸಿದರು. ಈ ರೀತಿ 19 ವರ್ಷಗಳ ಕಾಲ ಯಾರೊಬ್ಬರಲ್ಲೂ ಕೈಚಾಚದೆ ಚಾಂದಿನಿ ತಂದೆ ಮಗಳಿಗೆ ಚಿಕಿತ್ಸೆ ಕೊಡಿಸಿದ್ದರು. ಈ ನಡುವೆ ಸ್ಟಿರಾಯಿಡ್ ಸೇವನೆಯ ಪರಿಣಾಮ ಚಾಂದಿನಿ ಕಣ್ಣಿನ ದೃಷ್ಟಿ ಹೀನಗೊಂಡವು. ಈ ಸಂದರ್ಭ ಪೋಷಕರೇ ಮಗಳ ಕಣ್ಣಾಗಿ ಕಾಪಾಡಿದರು. ಅನಾರೋಗ್ಯದ ನಡುವೆಯೂ ಚಾಂದಿನಿಯವರ ಕಲಿಕೆಯ ಆಸಕ್ತಿ ಕಡಿಮೆಯಾಗಿರಲಿಲ್ಲ. ಹಾಗಾಗಿ 7ನೆ ತರಗತಿ ಪರೀಕ್ಷೆಯನ್ನು ಶಿಕ್ಷಕರ ಸಹಕಾರದೊಂದಿಗೆ ಖಾಸಗಿಯಾಗಿ ಬರೆದು ಉತ್ತೀರ್ಣರಾದರು.

10ನೆ ತರಗತಿ ಪರೀಕ್ಷೆ ವೇಳೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಚಾಂದಿನಿಗೆ ವಿಶೇಷ ಮುತುವರ್ಜಿ ಮೇರೆಗೆ ಆಂಬುಲೆನ್ಸ್‌ನಲ್ಲಿ ತೆರಳಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು. 10ನೆ ತರಗತಿ ಪಾಸ್ ಆದ ಚಾಂದಿನಿ ತಮ್ಮ ಅನಾರೋಗ್ಯದ ಜತೆಯಲ್ಲೇ ಖಾಸಗಿ ಉದ್ಯೋಗವೊಂದಕ್ಕೆ ಸೇರಿ ಪಿಯುಸಿ ಪರೀಕ್ಷೆ ಬರೆದರು. ಈ ನಡುವೆ ಚಾಂದಿನಿಯ ಅನಾರೋಗ್ಯದ ಅರಿವಿದ್ದರೂ ಕಾಸರಗೋಡಿನ ಬಂದಡ್ಕದ ಪುರುಷೋತ್ತಮ ಅವರು 2013ರಲ್ಲಿ ಚಾಂದಿನಿ ಅವರ ಕೈ ಹಿಡಿದರು. ಪತಿಯ ಪ್ರೀತಿ, ಆರೈಕೆಯ ಜತೆಯಲ್ಲಿ ಪದವಿ ಪರೀಕ್ಷೆಯನ್ನೂ ಖಾಸಗಿಯಾಗಿ ಚಾಂದಿನಿ ಮುಗಿಸಿದ್ದು, ಪಂಜದ ಮೊರಾರ್ಜಿ ದೇಸಾಯಿ ವಿದ್ಯಾಸಂಸ್ಥೆಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ. 6 ವರ್ಷದ ಪುಟ್ಟ ಕಂದಮ್ಮನ ತಾಯಿಯಾಗಿಯೂ ತನ್ನ ಕರ್ತವ್ಯ ನಿರ್ವಹಿಸುತ್ತಿರುವ ಚಾಂದಿನಿಯವರ ಆಸ್ಪತ್ರೆ ಬದುಕು ಮಾತ್ರ ಮುಂದುವರಿದಿದೆ.

 

ಇದನ್ನೂ ಓದಿ : ಪಿಸಿಒಡಿ, ಪಿಸಿಒಎಸ್ ಸಮಸ್ಯೆ ಎದುರಿಸುತ್ತಿದ್ದೀರಾ ? ಹಾಗಾದ್ರೆ ಇದನ್ನು ಸೇವಿಸಿ !!

 

ಇಷ್ಟೇ ಅಲ್ಲದೆ ಹೈಪರ್ ಐಜಿಇ ಮೆಡಿಕೇಟೆಟ್ ಮಸ್ಟ್ ಸೆಲ್ ಆಕ್ಟಿವೇಶನ್ ಸಿಸ್ಟಮ್ (Hyper IGE Medicated Mast cell activation syndrome) ಎಂಬ ಕಾಯಿಲೆಯಿಂದ ಬಳಲುತ್ತಿರುವ ಚಾಂದಿನಿ ಹೃದಯದ ಬಲಭಾಗದಲ್ಲಿ ಟ್ಯೂಮರ್ ಆಗಿರುವುದು ಇತ್ತೀಚೆಗೆ ಪತ್ತೆಯಾಗಿದೆ. ಇದೀಗ ಬೆಂಗಳೂರಿನ ಆಸ್ಪತ್ರೆಯಲ್ಲಿ ಇದಕ್ಕಾಗಿ ಶಸ್ತ್ರ ಚಿಕಿತ್ಸೆಗೆ ತೆರಳುವಂತೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ವೈದ್ಯರು ಸೂಚನೆ ನೀಡಿದ್ದಾರೆ.

ಇದು ಸುಳ್ಯದ ಚಾಂದಿನಿ ಪುರುಷೋತ್ತಮ ಅವರ ಬದುಕಿನ ಕಥೆ. ಚಾಂದಿನಿ ಅವರಿಗೆ ಸುಮಾರು ಮೂರು ವರ್ಷ ಪ್ರಾಯವಿದ್ದಾಗ ಆರೋಗ್ಯದ ಸಮಸ್ಯೆ ಕಂಡುಬಂದಿತ್ತು. ಅಂದಿನಿಂದ ಆಸ್ಪತ್ರೆ ಮೆಟ್ಟಿಲು ಹತ್ತುತ್ತಲೇ ಬದುಕು ಸಾಗಿಸಿದ ಚಾಂದಿನಿಗೆ “ಬದುಕಿನಲ್ಲಿ ನಾಳೆ ಇದೆ” ಎನ್ನುವ ಭರವಸೆ, ವಿಶ್ವಾಸದಿಂದ ಇಂದು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಆರೋಗ್ಯಕ್ಕಾಗಿ ಸುಮಾರು 70 ಲಕ್ಷ ಖರ್ಚು ಮಾಡಿದ್ದಾರೆ. ಹಲವು ಬಾರಿ ಆಪರೇಷನ್‌ ಆಗಿದೆ. ಕೃತಕ ಉಸಿರಾಟ, ವಿದ್ಯುತ್‌ ಟ್ರೀಟ್‌ಮೆಂಟ್‌ ಹೀಗೆ ಹಲವು ಚಿಕಿತ್ಸೆಗಳು ನಡೆದಿದೆ. ಇತ್ತೀಚೆಗೆ ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಅಲ್ಲಿನ ಬಿಲ್ ಮೊತ್ತ ಪಾವತಿಸಲು ಸಾಧ್ಯವಾಗದೆ ದಯಾ ಮರಣ ಪಾಲಿಸುವಂತೆ ಚಾಂದಿನಿಯವರು ಸರಕಾರಕ್ಕೆ ಪತ್ರ ಬರೆದಿದ್ದರು. ಚಾಂದಿನಿಗೆ, ಅವರ ಚಿಕಿತ್ಸೆಗೆ ಈಗಾಗಲೇ ಸಾಕಷ್ಟು ಸಹೃದಯಿಗಳು ಸಹಕರಿಸಿದ್ದಾರೆ. ಮುಂದೆಯೂ ಸಹಕಾರದ ಅಗತ್ಯವಿದೆ. ನೆರವು ನೀಡಲು ಇಚ್ಚಿಸುವ ಸಹೃದಯಿಗಳು ಸಹಾಯ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಕುಟುಂಬವಿದೆ.

Continue Reading

DAKSHINA KANNADA

ಮಂಗಳೂರು : ನ. 30 ರಂದು ‘ಇಸ್ಕಾನ್’ ನಶಾಮುಕ್ತಿ ಅಭಿಯಾನ; ಅಮೋಘ್ ಲೀಲಾ ದಾಸ್ ಭಾಷಣ

Published

on

ಮಂಗಳೂರು : ಇಸ್ಕಾನ್ ಕುಡುಪುಕಟ್ಟೆವತಿಯಿಂದ ನಡೆಯಲಿರುವ ನಶಾ ಮುಕ್ತಿ ಅಭಿಯಾನಕ್ಕೆ ನ. 30ರಂದು ಅಪರಾಹ್ನ 3.30ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಚಾಲನೆ ನೀಡಲಾಗುವುದು ಎಂದು ಇಸ್ಕಾನ್ ಕುಡುಪು ಕಟ್ಟೆಯ ಕಾರ್ಯದರ್ಶಿ ಎಚ್.ಜಿ. ಪ್ರೇಮಾ ಭಕ್ತಿದಾಸ್ ಮತ್ತು ಯುವ ಘಟಕದ ಸದಸ್ಯ ಎಚ್.ಜಿ. ದೇವಧರ್ಮ ದಾಸ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಶಾ ವ್ಯಸನದ ವಿರುದ್ದ ಜಾಗೃತಿ ಮೂಡಿಸಲು ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಉದ್ಘಾಟನೆಯ ಬಳಿಕ ‘ಉಮಂಗ್ 3.0 : ಮೆಗಾ ಯೂತ್ ಫೆಸ್ಟ್‌ವಲ್’ ನಡೆಯಲಿದ್ದು, ಇಸ್ಕಾನ್ ಹೊಸದಿಲ್ಲಿಯ ಉಪಾಧ್ಯಕ್ಷ ಪ್ರೇರಕ ಭಾಷಣಕಾರ ಅಮೋಘ್ ಲೀಲಾ ದಾಸ್ ಪಾಲ್ಗೊಳ್ಳಲಿದ್ದಾರೆ. ದೇಶಾದ್ಯಂತದ 1,200ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಇಸ್ಕಾನ್ ಯೂತ್‌ವಿಂಗ್‌ನ್ನು ಯುವ ಪ್ರಭಾವದ ಉಪಕ್ರಮಗಳಿಗಾಗಿ ಶ್ಲಾಘಿಸಿದ್ದು, ವ್ಯಸನ ಮತ್ತು ಮಾದಕ ದ್ರವ್ಯಗಳ ವಿಷಯದ ಕುರಿತು ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡಲು ಎಂಒಯುಗೆ ಸಹಿ ಹಾಕಿದೆ. ಕರ್ನಾಟಕದಲ್ಲಿ ಸುಮಾರು ಶೇ.30ರಷ್ಟು ನಶಾ ವ್ಯಸನ ಪ್ರಕರಣಗಳು ಮಂಗಳೂರು ನಗರದಲ್ಲಿಯೇ ಕಂಡುಬಂದಿದ್ದು ಇಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಎಚ್.ಜಿ. ಪ್ರೇಮಾ ಭಕ್ತಿದಾಸ್‌ ತಿಳಿಸಿದರು.

Continue Reading

DAKSHINA KANNADA

ಮಂಗಳೂರು: ಅದ್ದೂರಿಯಾಗಿ ನಡೆದ ಬರ್ಕೆ ಗುರ್ಜಿ ದೀಪೋತ್ಸವ

Published

on

ಮಂಗಳೂರು: ಬರ್ಕೆ ಫ್ರೆಂಡ್ಸ್‌ ಇದರ ಗುರ್ಜಿ ದೀಪೋತ್ಸವ ಮಣ್ಣಗುಡ್ಡೆಯಲ್ಲಿ ಅದ್ಧೂರಿಯಾಗಿ ನಡೆದಿದೆ. ಸಾವಿರಾರು ಜನರು ಈ ಗುರ್ಜಿ ದೀಪೋತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರಾರಾಗಿದ್ದಾರೆ. ಹುಲಿ ವೇಷ ಮಾತ್ರವಲ್ಲದೆ ಹಲವಾರು ಸಮಾಜಸೇವಾ ಕಾರ್ಯದ ಮೂಲಕ ಜನರ ಕಷ್ಟಕ್ಕೆ ಸ್ಪಂಧಿಸುತ್ತಿರುವ ಬರ್ಕೆ ಫ್ರೆಂಡ್ಸ್‌ ಈ ಧಾರ್ಮಿಕ ಕಾರ್ಯಕ್ರಮವನ್ನು ಕೂಡಾ ಆಯೋಜಿಸುತ್ತಿದೆ. ಈ ಕಾರ್ಯಕ್ರಮದ ಮೂಲಕ ಜನರಿಗೆ ಭಕ್ತಿಯ ಪ್ರಸಾದ ನೀಡುವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮನರಂಜಿಸುವ ಕೆಲಸ ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ನಡೆಸಲಾಗುತ್ತಿದೆ. ಬುಧವಾರ ಸಂಜೆ ಮಣ್ಣಗುಡ್ಡೆಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸುವುದರೊಂದಿಗೆ ಬರ್ಕೆ ಗುರ್ಜಿ ದೀಪೋತ್ಸವ ಸಂಪನ್ನಗೊಂಡಿದೆ.


ಇದುವರೆಗೆ ನೂರಾರು ಸಾಧಕರನ್ನು ಗುರುತಿಸಿ ಗೌರವಿಸಿರುವ ಬರ್ಕೆ ಫ್ರೆಂಡ್ಸ್ ತಂಡ ಈ ಬಾರಿ ವಿಶೇಷವಾಗಿ ಇಬ್ಬರು ಹಿರಿಯರನ್ನು ಹಾಗೂ ಇಬ್ಬರು ಕಿರಿಯರನ್ನು ಸನ್ಮಾನಿಸಿದೆ. ಕಟೀಲು ಯಕ್ಷಗಾನ ಮೇಳದ ಹಿರಿಯ ಕಲಾವಿದ ಉಮೇಶ್ ಕಕ್ಕೆಪದವು ಅವರನ್ನು ಈ ವೇದಿಕೆಯಲ್ಲಿ ಸನ್ಮಾನಿಸಲಾಗಿದೆ. ಉಮೇಶ್ ಕಕ್ಕೆಪದವು ಕಟೀಲು ಯಕ್ಷಗಾನದಲ್ಲಿ ಮಹಿಷಾಸುರನ ಪಾತ್ರದ ಮೂಲಕ ಜನರ ಮನಸ್ಸು ಗೆದ್ದವರಾಗಿದ್ದಾರೆ. ಅಷ್ಟೇ ಅಲ್ಲದೆ ಒಬ್ಬ ಬಡ ಕೂಲಿಕಾರ್ಮಿಕನಾಗಿ ಹಗಲಿನಲ್ಲಿ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡಿ ಸಂಜೆಯಾಗುತ್ತಿದ್ದಂತೆ ಯಕ್ಷಗಾನದಲ್ಲಿ ಬಣ್ಣ ಹಚ್ಚಿ ದೇವಿಯ ಸೇವೆ ಮಾಡುತ್ತಿದ್ದಾರೆ. ಇವರ ಈ ಸೇವಾ ಕಾರ್ಯವನ್ನು ಬರ್ಕೆ ಫ್ರೆಂಡ್ಸ್‌ ಗುರುತಿಸಿ ಗೌರವಿಸಿದೆ.


ಜಾತಿ ಧರ್ಮದ ಎಲ್ಲೆ ಮೀರಿ ಪ್ರೀತಿ ವಿಶ್ವಾಸಕ್ಕೆ ಬೆಲೆ ನೀಡುವ ಬರ್ಕೆ ಫ್ರೆಂಡ್ಸ್‌ , ತಮ್ಮೆಲ್ಲಾ ಕಾರ್ಯಕ್ಕೆ ಹಲವಾರು ವರ್ಷಗಳಿಂದ ಕೈ ಜೋಡಿಸುವ ಸೆಂಟ್ರಲ್ ಮಾರ್ಕೆಟ್‌ನ ಹಣ್ಣಿನ ವ್ಯಾಪಾರಿ ಅಶ್ರಫ್ ಅವರನ್ನು ಸನ್ಮಾನಿಸಿದೆ. ಅಶ್ರಫ್ ಅವರ ಸಂಕಷ್ಟದ ಸಮಯದಲ್ಲಿ ಬರ್ಕೆ ಫ್ರೆಂಡ್ಸ್‌ ಸಹಾಯ ಮಾಡಿದ್ದನ್ನು ಮರೆಯದೆ ಕೃತಜ್ಞತೆಯನ್ನು ತೋರಿಸಿದ್ದಾರೆ. ಬರ್ಕೆ ಫ್ರೆಂಡ್ಸ್ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಹಲವಾರು ವರ್ಷದಿಂದ ಗುರ್ಜಿ ಸೇರಿದಂತೆ ಎಲ್ಲಾ ಕಾರ್ಯಕ್ರಮದಲ್ಲೂ ಅಶ್ರಫ್ ಅವರು ಸಹಾಯ ಹಸ್ತ ನೀಡಿದ್ದಾರೆ. ಇದೇ ವೇಳೆ ಸ್ಕೇಟಿಂಗ್‌ನಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಕೇಟ್ ಆರ್ವಿ ವಾಸ್ ಹಾಗೂ ತನ್ನ ಸುಂದರ ಹಸ್ತಾಕ್ಷರಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಕೃತಿ ಬೋಳೂರು ಅವರನ್ನು ಸನ್ಮಾನಿಸಲಾಗಿದೆ.

 

ಗುರ್ಜಿ ದೀಪೋತ್ಸವದ ಹಿನ್ನಲೆಯಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆದಿತ್ತು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವರ್ಣರಂಜಿತ ಬೆಳಕಿನಲ್ಲಿ ರಸಮಂಜರಿ ಹಾಗೂ ನೃತ್ಯಗಳ ಮೂಲಕ ಜನರನ್ನು ರಂಜಿಸಲಾಗಿತ್ತು. ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಂಗಳೂರು ಮೇಯರ್ ಮನೋಜ್ ಕೋಡಿಕಲ್, ಸರ್ವದಾ ಡಿಸ್ಟಿಲರ್ಸ್ ಇದರ ಮಾಲಕ ಮನುಕುಮಾರ್, ಮಾಯಾ ಕ್ಯಾಟರರ್ಸ್ ಮಾಲಕ ಮಾದವ ಕಾಮತ್, ಮಾಯ ಇಂಟರ್ನ್ಯಾಷನಲ್ ಇದರ ಮಾಲಕಾರದ ವಾಸುದೇವ ಕಾಮತ್, ಇನ್ ಆರ್ಟ್‌ದ ಮಾಲಕ ಯಶ್ ರಾಜ್‌, ಗುರ್ಜಿಯನ್ನು ಆರಂಭಿಸಿದ ಯಜ್ಞೇಶ್ ಬರ್ಕೇ, ಸುಚೀಂದ್ರ ಅಮೀನ್ , ಕಿಶನ್ ಬರ್ಕೆ, ಸಂತೋಷ್ ಶೆಟ್ಟಿ , ಉದ್ಯಮಿ ಅಜಿತ್ ಕಾಂಚನ್ , ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಬಿ ಕರ್ಕೇರಾ ಮೊದಲಾದವರು ಉಪಸ್ಥಿತರಿದ್ದರು.

Continue Reading

LATEST NEWS

Trending

Exit mobile version